Thursday, January 14, 2016

~~~~~ ಆನಂದಮಯ~~~~~~




ಮೋಡ  ಕವಿದ ಆಕಾಶ .... ಈಗಲೋ  ಆಗಲೋ ಮಳೆ ಬರುವಂತಿತ್ತು ... ಬದುಕಿನ ಪ್ರತಿಬಿಂಬವೋ ಎಂಬಂತೆ ಗುಡುಗು ಸಿಡಿಲುಗಳಂತ ಆತಂಕದ ನಡುವೆ ತಣ್ಣಗೆ ಬರುವ ಮಳೆ ಮನಸ್ಸಿಗೆ ತಂಪೆರದಂತೆ .... ಸಮಸ್ಯೆಗಳೆಂಬ ಆತಂಕಗಳ ನಡುವೆ ಅಲ್ಲೆಲ್ಲೋ ಮೋಡಗಳ  ನಡುವೆ ಆಗಾಗ  ಇಣುಕುವ  ಸೂರ್ಯನಂತೆ ಭರವಸೆ ಎನ್ನುವ ಬೆಳಕು ಕಣ್ಣು ಮುಚ್ಚಾಲೆ ಆಡುತ್ತಿತ್ತು ...ಆದರೆ ಯಾರಿಗೆ ಗೊತ್ತಿತ್ತು ಇವತ್ತಿನ ಮಳೆ ನನ್ನ ಬದುಕಲ್ಲಿ ಕಾಮನಬಿಲ್ಲು ಸ್ರಷ್ಟಿಸುವುದು ಎಂದು ....!!!ನಾನೇನೋ ಪ್ರತಿದಿನದಂತೆ ಮತ್ತೊಂದು ಪ್ರವಾಹ/ಪ್ರಳಯದ ನೀರಿಕ್ಷೆಯಲ್ಲಿ ನಡುಗುತ್ತಲಿದ್ದೆ ...ಆದರೆ ಯಾವುದೋ ಕುರಿಯ ಉಣ್ಣೆ ಇನ್ನ್ಯಾರದೋ ಕಂಬಳಿ ಆದಂತೆ ....ಎಲ್ಲೋ ಆರಿದ ನೀರು ಮಳೆ ಆಗಿ ಇನ್ನೆಲ್ಲೋ ಬಾಯಾರಿದ ಬಾಯಿಗೆ/ಭೂಮಿಗೆ ನೀರೆರೆದಂತೆ .... ಪ್ರಕೃತಿಯ ಲೆಕ್ಕಾಚಾರ ಅರಿತವರಾರು !!!????

ನನ್ನ ಬದುಕಿಗಂತೂ ಮಳೆ ಕೊಳೆ ಓಡಿಸುವ ನೆಪದಲ್ಲಿ ಚಿಕ್ಕ ಪುಟ್ಟ ಜೀವಿಗಳ ಗೂಡುಗಳನ್ನೇ ನಾಶಮಾಡುವ ಪ್ರಳಯಾಂತಕ ....!!!!

ಎರಡು ದಿನ ಎಡಬಿಡದೆ ಹಿಡಿದ ಜ್ವರ ಹಾಗೂ ಎಡಬಿಡದೆ ಸುರಿದ ಮಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು ....ಎರಡು ದಿನವಾದರೂ ಮಾರಾಟವಾಗದೇ ಕೊಳೆಯುತ್ತ ಬಿದ್ದಿದ್ದ ಹೂವನ್ನು ಹೊಟ್ಟೆಗೆ ಹಿಟ್ಟಿಲ್ಲದ  9  ವರ್ಷದ  ಮಗ ಹೇಗಾದರೂ ಮಾರಿ ಬರುತ್ತೇನೆ ಎಂದು ಹೋದವ ಇನ್ಯಾವುದೋ ಮಾಯೆಯಲ್ಲಿ ಕೊಳವೆ ಬಾವಿಗೆ ಬಿದ್ದು ಹೆಣವಾಗಿ ಬಂದಿದ್ದ ...ಅದೇ ಹೂ ಅವನ ಮೇಲೆ ತಣ್ಣಗೆ ಮಲಗಿತ್ತು .... 

ಇದ್ದೊಬ್ಬ  ಮಗನನ್ನು ನುಂಗಿ ನೀರಾಗಿತ್ತು ಮಳೆ ....!!!

ಬದುಕಲು ನನಗೆ ಏನೂ ಗುರಿ ಇಲ್ಲ ಈಗ ..ಗ಼ುರಿ ಬೇಕಾಗಿಯೂ ಇರಲಿಲ್ಲ ..... ಆದರೆ ಸಾಯುವತನಕ ಬದುಕಬೇಕಲ್ಲಾ ಅಥವಾ ಸಾಯುವುದಕ್ಕಾದರೂ ಬದುಕಬೇಕಲ್ಲ ..... ತೇನವಿನಾ ತ್ರಣಮಪಿ ನ ಚಲತಿ ತೇನವಿನಾ!!!!  ಪಕ್ಕದ ಮನೆಯ ರೇಡಿಯೋ ಹಾಡುತ್ತಿತ್ತು ...... 

ಅದಾಗಿ 6 ತಿಂಗಳು ....  ಮತ್ತದೇ ಮಳೆ ....  ಮತ್ತದೇ  ಸಂಜೆ ... ಮತ್ತದೇ ಆತಂಕ ...!!!ಪಕ್ಕದ ಮನೆಯ ಗಿರಿಜಮ್ಮನ ಒತ್ತಾಯಕ್ಕೆ  ಅವಳ ಜೊತೆ ಹೊರಟಾಗಿತ್ತು ..... 

ಗೋಕುಲದ ನಂದನವನ ಚಿತ್ರಿಸುವ ಪುಟ್ಟ ಪುಟ್ಟ ಹೆಜ್ಜೆಗಳು ... ತೊದಲು ನುಡಿಗಳು ... ಮುಂಜಾನೆಯ ಮಡಿಲಲ್ಲಿ ಮೆಲ್ಲಗೆ ಕಣ್ಣು ಬಿಡುವ ಹೂ ಪಕಳೆಗಳಂತಹ ಕಣ್ಣುಗಳು ... ಬಂದು ನಿಂತಿದ್ದು "ಆನಂದಮಯ" ಅನಾಥಾಲಯದ ಎದುರಿಗೆ ..... ಗಿರಿಜಮ್ಮನ ಮನೆಗೆಲಸದ ಒಡತಿ ಸ್ಥಾಪಿಸಿದ ಅನಾಥಾಲಯಕ್ಕೆ ಇದ್ದ "ಆಯಾ" ಅವಶ್ಯಕತೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತ್ತು ......!!!

ಪುಟ್ಟ ಪುಟ್ಟ ಕಂದಮ್ಮಗಳ ಕೇಕೆ ....ಎದುರಿಗೆ ಆನಂದಮಯ........ ಹಾಗೂ ಮಳೆ ಬಿಟ್ಟುಹೋದ ಕಾಮನಬಿಲ್ಲು ......!!!!