Sunday, August 6, 2017

ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ

                            ಮಾರುವುದು ಹೂಗಳನ್ನು,ಮುಳ್ಳುಗಳನ್ನಲ್ಲಾ


"ನನ್ನ ಮಗನ ಮುಖ ನೋಡಿ ನನಗೆ ನಗು ಬರುತ್ತಿತ್ತು,ಆದರೆ ಮೊಮ್ಮಗನ ಎದುರು ನಗೋದು ಚೆನ್ನಾಗಿರಲ್ಲ ಅಂತ ಸುಮ್ಮನಿದ್ದೆ. ಅವನ ಮಗ ಅವನಿಗೆ ತಿರುಗುತ್ತರ ಕೊಟ್ಟಾಗ ಎನಾಗಬಹುದು ಅನ್ನೋ ಪರಿವೆ ನನಗಿದೆ. ಅಲ್ಲ,  ಮನೇಲೂ  ಮಾತಾಡಬಾರದು ಅಂದ್ರೆ ಇನ್ನೇಲ್ಲಿ ಮಾತಾಡಬೇಕು ನಾವು?!" ಎನ್ನುತ್ತಾ,  ಹೂ ಕೊಳ್ಳಲು ಹೋದ ನನ್ನ ಬಳಿ ತಿರುಗಿ "ಯಾವ ಹೂ ಬೇಕಮ್ಮಾ?" ಎಂದಾಗ ಅವಳ ಕಣ್ಣಲ್ಲಿ ಮೊದಲ ಬಾರಿಗೆ ನೋವಿನ ಛಾಯೆ ನೋಡಿದ್ದು ನಾನು. ಬನಶಂಕರಿಯ ಆ ಬೀದಿಯಲ್ಲಿ ಎಷ್ಟೋ  ಹೂ ಮಾರುವವರಲ್ಲಿ ಆ ಅಜ್ಜಿ ಹೂವಮ್ಮ ನನಗೆ ನೆಚ್ಚು .ಯಾವಾಗಲು ಹೂ ನಗೆ,ಅಕ್ಕರೆ ಸೂಸುತ್ತಾ ಹೂ ಮಾರುವ,ಎಲ್ಲೋ ಒಮ್ಮೆ ಮಳೆ ಹನಿದಾಗ "ನಮಗೆ ಎಕೆ ದೇವರು ಕಷ್ಟ ಕೊಡುತ್ತಾನೆ" ಎಂದು ಕೊರಗುವ ಅವಳ ಮಗಳೋ/ಸೊಸೆಯೋ ತಲೆಗೊಂದು ಮೋಟಕಿ "ಸ್ವಾರ್ಥಿಗಳಾಗಬಾರದು ನಾವು, ಹೂಗಳ ಬಗ್ಗೆ ಮಾತ್ರ ಯೋಚಿಸದೆ ,ಹೂ ಗಿಡಗಳ ಬಗ್ಗೆಯೂ ಯೋಚಿಸು" ಎಂದು ಸರಳವಾಗಿ ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಾರ್ವಕಾಲಿಕ ಸತ್ಯವನ್ನು ಮನವರಿಕೆ ಮಾಡಿಸುವ, ವಿಶಾಲವಾಗಿ ಚಿಂತಿಸಲು ಒಳ್ಳೆಯ ಮನಸ್ಸಿದ್ದರೆ ಸಾಕಲ್ಲವಾ ಎಂಬ ಚಿಂತನೆಗೆ ಹಚ್ಚಬಲ್ಲ ಹೂವಮ್ಮ ಇಂದು ಮೊದಲಬಾರಿಗೆ ಇನ್ನೊಬ್ಬರೊಂದಿಗೆ ತನ್ನ ನೋವನ್ನು ಹಂಚಿಕೊಂಡದ್ದನ್ನು ನೋಡಿದ್ದು.  ಬಹುಷಃ ಆಕೆ ಹೂವಮ್ಮನ ಪರಿಚಯದವಳೋ/ಗೆಳತಿಯೋ ಇರಬಹುದು, ಅದಕ್ಕೆ ಪ್ರತಿಯಾಗಿ ಆಕೆ "ನಿಮ್ಮ ಸೊಸೆಯಂತು ಬಿಡಿ ,ನಿಮ್ಮ ಮಗನಿಗೆ ಬುದ್ಧಿ ಬೇಡವೇ!ನೀವೇನು ಅವನ ದುಡಿಮೆಲಿ ಬದುಕುತ್ತಿಲ್ಲ. ಮಳೆ ಗಾಳಿ, ಬಿಸಿಲೆನ್ನದೆ ಇಲ್ಲಿ ಹೂ ಮಾರಿ ನಿಮ್ಮ ಬದುಕನ್ನು ನೀವು ನೋಡಿಕೊಳ್ತಾ ಇದ್ದೀರಾ. ನಾಲ್ಕು ಜನರನ್ನಾ ಕರೆಸಿ ಮಾತನಾಡಿ" ಎಂದಾಗ ಅದಕ್ಕೆ ಪ್ರತಿಯಾಗಿ ಹೂವಮ್ಮ ತನ್ನ ಎಂದಿನ ನಗು ಸೂಸುತ್ತಾ "ಈ ಸಮಸ್ಯೆಗಳೆಲ್ಲಾ ತಾತ್ಕಾಲಿಕ. ನನ್ನ ಮಗ, ಸೊಸೆಗೆ ನನ್ನ ಮೇಲೆ ಪ್ರೀತಿ ಇಲ್ಲಾ ಎಂದಲ್ಲ. ಅವರು ಹಾಗು ನಾನು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಸಂಘರ್ಷ ಉಂಟಾಗುತ್ತದೆ. ಕಾಲವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ" ಎಂದು ಹೂವನ್ನು ನನ್ನ ಕೈಗಿತ್ತಾಗ ಅವಳ ಕಣ್ಣುಗಳು ಹೇಳುತಿದ್ದವು ನನಗೆ ಮಾರಲು ಬರುವುದು ಹೂಗಳನ್ನು ಮುಳ್ಳುಗಳನ್ನಲ್ಲ.........


(Note : an real incident)Saturday, May 13, 2017

ಬಿಡದಾ ಭುವಿಯಾ ಮಾಯೆ.....

( ಆಕಾರಕ್ಕೊಂದು  ಅವತಾರ :) ರವಿ ಮಡೋಡಿ  ಕ್ಯಾಮರಾ ಕಣ್ಣಿನಿಂದ ಸೆರೆ ಹಿಡಿದ ಆಕಾರಕ್ಕೊಂದು ಅವತಾರ ಕೊಡುವ ಪ್ರಯತ್ನ :) ಚಿತ್ರಕ್ಕೊಂದು ಕತೆ :) )  ಬಿಡದಾ ಭುವಿಯಾ ಮಾಯೆ ....... 

ಮುಂಜಾವಿನ ಹೊಂಬೆಳಕ ಕಾಂತಿಗೆ ಪುಳಕಗೊಂಡು ಮೈ ಮರೆತು ನಿದ್ರಿಸುತ್ತಿದ್ದ ಹೂಗಳು  ಕಣ್ಣು ಬಿಡುತ್ತಿರುವ ಸಮಯದಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ನನ್ನ ಪ್ರತಿದಿನದ ಸುಪ್ರಭಾತ ....  ಪುಟ್ಟ ಕಿಟಕಿಯ  ಸರಳುಗಳ ನಡುವೆ  ತನ್ನ ಹೋಂಗಿರಣದ ಕೈ ಚಾಚಿ ನನ್ನ ಕಣ್ಣಲ್ಲಿ ದಿನವೂ ಹೊಂಬೆಳಕು ತುಂಬುವ ಸೂರ್ಯ ಇಂದೇಕೋ ಮೋಡ ಕವಿದಂತೆ ಸಪ್ಪಗಿರುವುದು !!??
ಏನು ಮಳೆ ಬರುವ ಸೂಚನೆಯೋ ??
ನನಗೆ ಕಂಡಹಾಗೆ ಎಲ್ಲ ಜೀವಿಗಳ ಭಾರ ಬವಣೆ ಹೊತ್ತು ಬಳಲಿ ಬೆಂಡಾದ ಭೂಮಿಗೆ ಮೋಡದಲ್ಲಿ ಮರೆಯಾಗಿ ಮಳೆಯಾಗಿ ಬಂದು ಭೂಮಿಯನ್ನು ಮುದ್ದಾಡಿ ಮತ್ತೆ ಆಗಸ ಸೇರುವ ಸೂರ್ಯ ಭುವಿಯ ಮುಖದಲ್ಲಿ ಹಸುರಿನ ಮುಗುಳ್ನಗೆ ತುಂಬಿ,ಜೀವಿಗಳ ಕಣ್ಣಲ್ಲಿ ಆಶಾಭಾವ ಹೊಮ್ಮಿಸಿ ಮತ್ತೆ ಎಂದಿನಂತೆ ಸಹಜವಾಗಿ ಕರ್ತವ್ಯದ ಎಡೆಗೆ ಮುಖಮಾಡಿ ನಗುವ ಸೂರ್ಯನಿಗೂ ಗ್ರಹಣ ಬಡಿದಾಗ ಜಗತ್ತೇ ಕತ್ತಲ ಕೂಪದಲ್ಲಿ ಮುಳುಗುತ್ತದೆ ... ಆದರೆ ಭೂಮಿ ಮಾತ್ರ ತನ್ನ ಬಳ್ಳಿಗಳ ಮನಸಿಗೆ ತಂಪೆರಯಲು ಪ್ರಯತ್ನಿಸುತ್ತಾ ಸೂರ್ಯನ ಬೆಳಕಿನ ನಿರೀಕ್ಷೆಯಲ್ಲಿ ಬೇಯುತ್ತದೆ ... ಇವಳು ಹಾಗೆ ,ಭೂಮಿಯ ಪ್ರತಿಬಿಂಬ ನನ್ನ ಕಣ್ಣಿಗೆ ....
ಹೊರಗಿನ ಪರಿಸರದ ಪ್ರತಿಬಿಂಬವೋ ಅವಳು ಎನ್ನುವಂತೆ ಯಾಕೋ ಇಂದು ಅವಳ ಮುಖದಲ್ಲಿ ಪ್ರಶಾಂತತೆಯ ಬದಲು ಚಿಂತೆಯ ಕಾರ್ಮೂಡ ಇಣುಕುತ್ತಿದೆ ... ಅವಳ ಕಣ್ಣು ಯಾವತ್ತೂ ತನ್ನ ಪ್ರಶಾಂತತೆಯನ್ನು ಕಳೆದು ಕೊಂಡದ್ದೇ ನೋಡಿಲ್ಲ ನಾನು .... ಕಾರಣ ಏನಿರಬಹುದು ... ????? ನಾನೇ  ಇರಬಹುದೇ ???!!
ಯಾವಾಗಲು ಉತ್ಸಾಹ ಚಿಮ್ಮುತ್ತಿರುವ ಕಣ್ಣುಗಳಲ್ಲಿ ಕಂಡು ಕಾಣದಂತ ದುಃಖದ ನೀರಿನ ಪಸೆ ...ಮಾತಲ್ಲಿ ದ್ರಢತೆ ,ಕಣ್ಣಲ್ಲಿ ಉತ್ಸಾಹ ,ಮುಖದಲ್ಲಿ ಎಂದಿಗೂ ಮಾಸದ ಆ ನಗು ಇಂದು ಎಲ್ಲವು ಮಾಯವಾಗಿ ಮನದಲ್ಲಿ ಕಟ್ಟಲು ತುಂಬಿದಂತೆ ಕಾಣುವ ಮುಖ ... !!??
ಎಲ್ಲ ದಿನದಂತೆ ಕೆಲಸಕ್ಕೆ ಹೋಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ ....ಏನಿರಬಹುದು ??ಆರೋಗ್ಯ ಸರಿ ಇಲ್ಲದಿರಬಹುದೇ ?ಅಥವಾ ನನ್ನ ಬಗ್ಗೆ ಚಿಂತೆ ಜಾಸ್ತಿ ಆಗಿರಬಹುದೇ !!?? ಎಲ್ಲ ಪ್ರಶ್ನೆಗಳಿಗೂ  ಉತ್ತರ ಅವಳೇ ಹೇಳಬೇಕು ...ಆದರೆ ಏಕೆ ನನ್ನ ಹತ್ತಿರವೂ ಸುಳಿಯುತ್ತಿಲ್ಲ ...ಏನಾಗಿದೆ !!!!?????
ಅವಳೇ ಹೇಳುತ್ತಿದ್ದಳಲ್ಲ ಎಲ್ಲ ಸುಂದರ ಸಂಭಂದಗಳಿಗೂ ಭದ್ರ ಬುನಾದಿ ಸ್ನೇಹ ... ಎಲ್ಲ ಸಂಬಂಧಗಳಿಗೆ ಕಾಲಘಟ್ಟದ ಮಿತಿಯಿದೆ ,ಆದರೆ ಜಗತ್ತಿನಲ್ಲಿ ಸ್ನೇಹಕ್ಕೆ ಯಾವುದೇ ಕಾಲ,ಜಾತಿ,ಭಾಷೆ ,ವಯಸ್ಸಿನ ಹಂಗಿಲ್ಲ ... ಎಲ್ಲ ಸಂಬಂಧಗಳ ಪ್ರಾರಂಭ ಸ್ನೇಹ ..... ನಾನು ಈ ಭೂಮಿಯ ತೆಕ್ಕೆಗೆ ಬಿದ್ದಾಗ ಮೊದಲ ಹಿತವಾದ ಸ್ಪರ್ಶ ಇವಳದ್ದೇ... ಇವಳೊಂದಿಗೆ ನನ್ನ ಮೊದಲ ಸ್ನೇಹ ... ಇವಳೇ ನನಗೆ ಉಳಿದ ಸಂಬಂಧಗಳೊಡನೆ ಸ್ನೇಹ ಬೆಳೆಸಲು ಪ್ರೇರಣೆ ... ಅವಳ ಅಕ್ಕರೆ, ಮಮತೆ ,ಪ್ರೀತಿ ನನ್ನೆಷ್ಟು  ಅವರಿಸಿತ್ತೆಂದರೆ ಅವಳಿದ್ದರೆ ಜಗತ್ತು ಸುಂದರ ,ಅವಳೊಮ್ಮೆ ನನ್ನ ಬಿಟ್ಟು ಹೋದರೆ ಎನ್ನುವ ಅನಿಸಿಕೆ ಕೂಡ ನನಗೆ ಅಳು ಭರಿಸುತ್ತಿತ್ತು ....ಅವಳಿದ್ದರೆ ಈ ಜಗತ್ತಿನಲ್ಲಿ ನಾನು ಕ್ಷೇಮ .... ಅವಳ ಆ ಸ್ನೇಹ ನನಗೆ ಎಲ್ಲಿಲ್ಲದ  ಉತ್ಸಾಹ ,ಹುಮ್ಮಸ್ಸು ,ಶಕ್ತಿ  ತುಂಬುತ್ತಿತ್ತು .... ಆದರೆ ಇಂದು ಇವಳೇಕೆ ಇಷು ಮಂಕಾಗಿದ್ದಾಳೆ ....??!!
ಇಷ್ಟು ವರ್ಷಗಳ ಅವಧಿಯಲ್ಲಿ ಎಲ್ಲೋ ಒಂದಿನ ಮಾತ್ರ ಅದೂ ನಾನು ಪೋಲಿಯೋ ಪೀಡಿತನಾಗಿ ಎರಡೂ ಕಾಲು ಸ್ವಾಧೀನ ತಪ್ಪಿದಾಗ ಇಷ್ಟು ಮಂಕಾಗಿದ್ದನ್ನು ನೋಡಿದ ನೆನಪು ...ತಂದೆಯ ನೆನಪಾಗಿರಬಹುದೇ ...??ತಂದೆಯ ಮುಖ ನೋಡಿದ ನೆನಪು ನನಗಿಲ್ಲ ....ಆದರೆ ಈಗ ಏನಾಗಿರಬಹುದು ??ನನಗಂತೂ ಎದ್ದುಹೋಗಿ ನಾನಿದ್ದೇನಮ್ಮಾ ಏನು ಚಿಂತೆ ಎನ್ನುವ ಅವಕಾಶವಿಲ್ಲ ...ನಾನಿದ್ದೇನಮ್ಮಾ ನಿನ್ನ ಚಿಂತೆಗೆ ಎನ್ನುವ ಅಸಹಾಯಕ ಪರಿಸ್ಥಿತಿ ..... ಒಂದು ಪುಟ್ಟ ಕಿಡಕಿ ,ಈ ನಾಲ್ಕು ಗೋಡೆ ,ಆ ಕಿಟಕಿಯಲ್ಲಿ ಕಾಣುವಷ್ಟು ಹೊರಗಿನ ದ್ರಶ್ಯ ,ಕಾಲ ಕಳೆಯಲು ಅಮ್ಮನೇ ತಂದುಕೊಟ್ಟ ಪೈಂಟ್ ಹಾಗೂ ಬ್ರಷ್ ,ಅಮ್ಮನೇ ಧಾರೆ ಎರೆದ ಅಕ್ಷರಗಳು ನನ್ನನ್ನು ದಿನಪತ್ರಿಕೆ ಓದುವಷ್ಟು ಸಬಲ ನನ್ನಾಗಿ ಮಾಡಿದೆ ,,ಅವಳು ನಗುತ್ತಿದ್ದರೆ ಮಾತ್ರ ನನಗೆ ನೆಮ್ಮದಿ,ಸಂತೋಷ ...ಅವಳ ಚಿಂತೆ ,ಅಳು ನನಗೆ ಸಹಿಸಲು ಅಸಾಧ್ಯ ...ಅವಳನ್ನು ಕೂಗಿ ಕೇಳುವುದೇ ಒಳ್ಳೆಯದು .."ಅಮ್ಮಾ ,ಇಂದು ಕೆಲಸಕ್ಕೆ   ಹೋಗೋದಿಲ್ವೇನಮ್ಮಾ ?"
ಅವಳ ಮುಖ ಮತ್ತಷ್ಟು ಸಪ್ಪಗಾಯಿತು ,ಹತ್ತಿರ ಬಂದು ಸುಮ್ಮನೆ ಕುಳಿತ ಅವಳನ್ನು ನೋಡಿ ಭಯವಾಯಿತು "ಏನಮ್ಮಾ ಆರೋಗ್ಯ ಚೆನ್ನಾಗಿಲ್ಲವೇ ?" ಎಂದಾಗ
"ನಾ ಕೆಲಸಕ್ಕೆ ಹೋಗುವ ಮನೆಯವರು ನಿನಗೆ  ವಯಸ್ಸಾಯಿತು ,ಇನ್ನು ನಿನ್ನಿಂದ  ಮನೆಗೆಲಸ  ಮಾಡಿಸುವುದು ಕಷ್ಟ ...ಹಾಗಾಗಿ ನಾಳೆಯಿಂದ ಬರುವುದು ಬೇಡ ಎಂದು ೩ ತಿಂಗಳ ಸಂಬಳ ಕೊಟ್ಟು ಕಳುಸಿದರಪ್ಪ " ಹೇಳುವಷ್ಟರಲ್ಲಿ ದುಃಖದ ಕಟ್ಟೆ ಒಡೆದಿತ್ತು ....
ಅವಳ ಅಳು ನನ್ನ ಹೊಟ್ಟೆಯಲ್ಲಿ ಸಂಕಟ ಹೆಚ್ಚಿಸುತ್ತಿತ್ತು ...ಹೊರಗೆ ಮಳೆ ...ಆಗಸದಲ್ಲಿ ಕಾರ್ಮೂಡ ...ಆದರೆ ನನಗೆ  ಬೆಳಕು ಬೇಕಿತ್ತು ... ಅವಳ ಆ ಸ್ನೇಹದ ಶಕ್ತಿ ಕಳೆಗುಂದಬಾರದು ,ಅಮ್ಮನ ಮನಸ್ಸಿನಲ್ಲಿ ಅಧೈರ್ಯ....... !!!!! ಆದರೆ ಇಂದು ಅವಳ ಆ ಅಧೈರ್ಯದ  ಅಪ್ಪುಗೆ ಕೂಡ ನನಗೆ  ಏನೋ ಒಂದು ರೀತಿಯ ಧೈರ್ಯ ಕೊಡುತ್ತಿತ್ತು .... ನಮ್ಮ ಮೊರೆಗೆ  ಆ ಕಾರ್ಮೋಡವೂ ಕರಗಿ ನೀರಾಗಿ ಭರವಸೆಯ  ಬೆಳಕು ನಮ್ಮ ಬದುಕಲ್ಲಿ ಮೂಡಲು ಹವಣಿಸುತ್ತಿತ್ತು ... ಅಂದು ಎಂದೋ ದಿನಪತ್ರಿಕೆಯಲ್ಲಿ  ವ್ಯಂಗ್ಯ ಚಿತ್ರ ಬಿಡಿಸುವ ಕೆಲಸಕ್ಕಾಗಿ ನಾನು ಹಾಕಿದ ಅರ್ಜಿ ಆಯ್ಕೆ ಆಗಿತ್ತು... ಅಂಗವೈಕಲ್ಯದ ಅನುಕಂಪದ ಆಧಾರದ ಮೇಲೆ ಮನೆಯಲ್ಲಿ ಕೂತು ಕೆಲಸ ಮಾಡಲು ಅನುಮತಿ ದೊರೆತಿತ್ತು ..... ಅಮ್ಮನ ಕಣ್ಣಲ್ಲಿ   ಖುಷಿ ಹುಟ್ಟಿಸಿದ ಮೊದಲ ಘಳಿಗೆ ...ಅವಳ ಮುಖದಲ್ಲಿನ ಮಂದಹಾಸಕ್ಕೆ ನಾನು ಕಾರಣ ಎಂಬ ಯೋಚನೆ ಜಗತ್ತಿನ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿತ್ತು ... ಈ ನನ್ನ ಬೆಳವಣಿಗೆ ನಿನ್ನ ಸ್ನೇಹದ ಶಕ್ತಿಯ ಕೊಡುಗೆ ಅಮ್ಮ ನನ್ನ ಮನಸ್ಸು ಕೂಗಿ ಹೇಳುತ್ತಿತ್ತು ...

ಇರಲು ಸ್ನೇಹದ ಜೊತೆ
       ಜಗತ್ತಿನ ಕಣ್ಣಿಗೆ ನಾನೊಂದು ಸುಂದರ ಕತೆ
        ಸ್ನೇಹವಿರದ  ಬರಡು ಬದುಕು
               ಆಗದು ಎಂದಿಗೂ  ದ್ರಶ್ಯ ಕಾವ್ಯ
                 ಕರಿಗಪ್ಪು ಕಾರ್ಮೋಡದ ಹಿಂದೊಬ್ಬ ಸೂರ್ಯ
                    ಬಂಗಾರದ  ಬೆಳಕು ಅಲೆಗಳ ಕಣ್ಣಲ್ಲಿ
                     ಬರಡು  ಮನಸೊಳಗೆ ಬೆಳಕಿನ ಆಟ
                        ಬರಡು ಬದುಕಿಗೊಂದು  ತಂಗಾಳಿಯ ಹಿತ
ಮುಳುಗುವ  ಭಯದ ಹಿಂದೊಂದು ಬೆಳಗುವ ಆಶಾಕಿರಣ
ಬರಡು ಜೀವಕೆ ಬಂಗಾರದ ಬದುಕಿನ ಆಲಾಪನಾ .......


Monday, August 29, 2016

ಹಬ್ಬಿ ನಗಲಿ ಪ್ರೀತಿ ...........................


( ಆಕಾರಕ್ಕೊಂದು  ಅವತಾರ :) ರವಿ ಮಡೋಡಿ  ಕ್ಯಾಮರಾ ಕಣ್ಣಿನಿಂದ ಸೆರೆ ಹಿಡಿದ ಆಕಾರಕ್ಕೊಂದು ಅವತಾರ ಕೊಡುವ ಪ್ರಯತ್ನ :) ಚಿತ್ರಕ್ಕೊಂದು ಕತೆ :) ) ಹಬ್ಬಿ ನಗಲಿ ಪ್ರೀತಿ ...........................ಇವತ್ತು ಏನಾದರೂ ಆಗ್ಲಿ ,ಅವಳಿಗೆ ಹೇಳಲೇಬೇಕು ಎಂದು ನಿರ್ಧಾರ ಮಾಡಿ ಆಗಿತ್ತು ...ಆದರೆ ಇದೇಕೆ ನನಗೆ ತಳಮಳ ..... ಏನೋ ತಪ್ಪು ಮಾಡುತ್ತಿರುವ ಅಪಾರಧಿ ಭಾವ .... ಈಗಿನ ಕಾಲದಲ್ಲಿ ಇದೆಲ್ಲ ಎಷ್ಟು ಸಹಜ ,ದಿನ ಬೆಳಗಾದ್ರೆ ದಿನಪತ್ರಿಕೆಗಳಲ್ಲಿ ಎಷ್ಟೊಂದು ಸುದ್ದಿ ಈ ತರಹದ್ದಿರುತ್ತದೆ ..... ಎಂತೆಂಥ ಚಿತ್ರನಟರೆ ಮಾಡುವಾಗ  ನಾನೊಬ್ಬನೇ ತಪ್ಪಾಗಿ ಯೋಚಿಸುತ್ತಿಲ್ಲವಲ್ಲ , ಇನ್ನು ಸಾಧ್ಯವಿಲ್ಲ ...ನನಗಿರುವ ರೂಪ ,ಹಣ ,ಕೆಲಸಕ್ಕೆ ಎಂತೆಂಥವರೋ ಸಿಗಬೇಕಿತ್ತು ,ಆದರೆ ಬುದ್ಧಿ ಇಲ್ಲದೆ ಅಥವಾ ಅಪ್ಪ ಅಮ್ಮನ ಮಾತಿಗೆ ಕಟ್ಟುಬಿದ್ದು ಅವಳನ್ನು ಕಟ್ಟಿಕೊಂಡು ದೊಡ್ಡ ತಪ್ಪು ಮಾಡಿದೆ..... ಈಗ ನಾನು ಮಾಡುತ್ತಿರುವುದು ಸರಿಯಾದ ಕ್ರಮ ..... ಅವಳಿಗೂ ಯಾರಾದರೂ ಅವಳಂತವರೇ ಸಿಗುತ್ತಾರೆ ಮುಂದೆ ಜೀವನದಲ್ಲಿ .....ಸ್ವಂತದ್ದೆಂಬ ನಿರ್ಧಾರವನ್ನೇ ಮಾಡದ ಪ್ರತಿಯೊಂದಕ್ಕೂ ತನ್ನನ್ನೇ ಅವಲಂಬಿತಳಾಗಿರುವ ಅವಳನ್ನು ನೋಡಿದಾಗಲ್ಲೆಲ್ಲ ಒಂದುಬಗೆಯ ಹಿಂಸೆ ....ಎಲ್ಲರ ಮನೆಯಲ್ಲೂ ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ ,ಇವಳ ರೀತಿ ಮನೆಯಲ್ಲಿ ಸುಮ್ಮನೆ ಕಾಲ ಕಳೆಯುತ್ತಿಲ್ಲ ......ಇವಳ ಜೊತೆಯಿದ್ದರೆ ಜೀವನ ಎಂದಿಗೂ ಸುಂದರವಾಗಲು ಸಾಧ್ಯವಿಲ್ಲ ,ನಾನೇ ತಪ್ಪು ತಿಳಿದಿದ್ದೆ ಇಷ್ಟು ದಿನ ,ಈ ಜೀವನ ಇವಳ ಜೊತೆ ಎಷ್ಟು ಸುಂದರ ಎಂದು ,ಆದರೆ ಗೆಳೆಯ ಸುಂದರ್ ಜೀವನ ಕಂಡಾಗ ನನ್ನದು ಎಂತಹ ಜೀವನ ಎನಿಸುತ್ತಿದೆ ....ಅವನ ಹೆಂಡತಿ ಹೇಗೆ ಎಲ್ಲ ಪಾರ್ಟಿ ಗಳಿಗೂ ಬಂದು ಎಲ್ಲರ ಜೊತೆ ಎಷ್ಟು ಸೋಶಿಯಲ್ ಆಗಿ ಇರುತ್ತಾಳೆ ,ಆದರೆ ಇವಳು ...... ಛೇ ...ಇನ್ನು ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ,
ಇವತ್ತು ಇವಳಿಂದ ಡೈವೋರ್ಸ್ ಗೆ ಸೈನ್ ಹಾಕಿಸಿಕೊಳ್ಳಲೇಬೇಕು ,ಏನಾದರೂ ಆಗಲಿ ..... ಯೋಚನಾಗತಿಯಲ್ಲಿ ಮನೆಯ ಹತ್ತಿರ ಬಂದಿದ್ದೆ ತಿಳಿಯಲ್ಲಿಲ್ಲ ...ಆದ್ರೆ ಯಾಕೋ ಮನೆಯ ಒಳಗೆ ಹೋಗಲು ಮನಸ್ಸು ಒಪ್ಪುತ್ತಿಲ್ಲ ,ಏನೋ ಅಪರಾಧಿ ಭಾವ ಕಾಡುತ್ತಿದೆ ...ಹತ್ತಿರದಲ್ಲಿರುವ ಪಾರ್ಕ್ ಲ್ಲಾದರೂ ಸ್ವಲ್ಪ ಸಮಯ ಕುಳಿತು ಹೋದರಾಯಿತು ಎಂದು ಪಾರ್ಕ್ ಗೆ ಬಂದರೇ ...... ಅರೇ ಇದೇನಿದು ಅದೇ ಚಿರಪರಿಚಿತ ಮುಖ ,ಅದೇ ದಿನಾಲೂ ನೋಡುವ ವಯಸ್ಸಾದ ಮನುಷ್ಯ ,ಏನೋ ದುಃಖದಲ್ಲಿ ಕುಳಿತಂತೆ ಕಾಣುತ್ತಿತ್ತು ....ಏನಾಶ್ಚರ್ಯ ಅವರ ಜೊತೆ ಯಾವಾಗಲು ಇರುತ್ತಿದ್ದ ಅವರ ಹೆಂಡತಿ ಕಾಣುತ್ತಿಲ್ಲವಲ್ಲ .....ಖುಷಿಯಾಗಿರುವುದು ಬಿಟ್ಟು ದುಃಖಿಸುತ್ತಿದ್ದಾನಲ್ಲ ಮುದುಕ .... ಯಾವಾಗಲೂ ಜೊತೆಯಾಗಿ ಓಡಾಡುತ್ತ ,ಸುತ್ತಲ ಜಗತ್ತೇ ಮರೆತವರಂತೆ ಮಾತಾಡುತ್ತ ಕುಳಿತಿರುತ್ತಿದ್ದ ಇವರಿಗೇನಾಯಿತು ...??? ನನ್ನ ಹಾಗೆ ಡೈವೋರ್ಸ್ ಗೆನಾದರೂ ಅಪ್ಲೈ ಮಾಡಿದರೆ ಹೇಗೆ ?? ಛೆ ನನ್ನ ಯೋಚನೆಗಿಷ್ಟು ...... !!! ಈ ಎಲ್ಲ ಕುತೂಹಲಕ್ಕೊಂದು ಕೊನೆ ಕಾಣಿಸಲಾದ್ರು ಅವರನ್ನು ಕೇಳೆಲೆಬೇಕೆಂದು "ಏನ್ ಸರ್ ಒಬ್ಬರೇ ಕುಳಿತ್ತಿದ್ದೀರಿ ?.... ಎಲ್ಲಿ ನಿಮ್ಮ ಮನೆಯವರು ?"

ಅವರ ಕಣ್ಣಲ್ಲಿ ನೀರು "ನನ್ನ ಮನೆಯವರು ನನಗೆ ಡಿವೋರ್ಸ್ ಕೊಟ್ಟು ಹೋದರು .... !!!!"

ಅವರ ಉತ್ತರಕ್ಕೆ ದಂಗಾಗಿ ಹೋದೆ,ಅಲ್ಲೇ ಒಂದೆಡೆ ನನ್ನ ಮನಸ್ಸಿಗೆ ನಿರಾಳ ಭಾವ ,ಅಬ್ಭಾ ನಾನೊಬ್ಬನೇ ಅಲ್ಲ ಈ ರೀತಿ ನಿರ್ಧಾರ ತೆಗೆದುಕೊಳ್ಳುವವನು ಎಂಬ ನಿರಾಳ .... ಆದರೂ ಕುತೂಹಲ ,ಇಷ್ಟು ವರ್ಷದ ನಂತರ ಈ ನಿರ್ಧಾರ !!!!
"ಹ್ಞಾ !! ಏನೂ ಡೈವೋರ್ಸ್ !!!! ಏಕೆ ಸರ್ ಏನಾಯಿತು? ಅಲ್ಲ ಮೊನ್ನೆಯಷ್ಟೇ ಹೋಟೆಲ್ನಲ್ಲಿ ನೋಡಿದ್ದೆನಲ್ಲ ನಿಮ್ಮಿಬ್ಬರನ್ನು ,ಎಷ್ಟು ಚೆನ್ನಾಗಿದ್ದಿರಿ ,ನೋಡಲು ತುಂಬಾ ಸಂತೋಷವಾಗುತ್ತಿತ್ತು ..... ಏನಾಯಿತು ...ಅದೂ ಇಷ್ಟು ವರ್ಷಗಳ ನಂತರ ...!!!"

"ಹೌದಪ್ಪ ತುಂಬಾ ಚೆನ್ನಾಗಿ ಇದ್ವಿ ,ಪ್ರೀತಿ ನೇ ಹಾಗೆ,ಪ್ರೀತಿ ಎಲ್ಲಿ ಇರುತ್ತೋ ಅದು ಇರೊರಿಗೊಂದೇ ಅಲ್ಲ ಸುತ್ತಲಿನವರಿಗೂ ಸಂತೋಷನೇ ನೀಡುತ್ತೆ ,ನಾವು ಹಾಗೆ ತುಂಬಾ ಚೆನ್ನಾಗಿ ಇದ್ವಿ ಮೊನ್ನೆವರೆಗೂ ....ಮೊನ್ನೆ ಸಂಜೆ ತಿಂಡಿ ತಿಂದಾದ ನಂತರ ಕಾಫೀ ತರ್ತೀನಿ ಎಂದು ಎಷ್ಟು ಹೇಳಿದರು ನೀರೇ ಬೇಕೆಂದು ಹಠಮಾಡಿ ನೀರೇ ಕುಡಿದಳು .....
ಹ್ಞಾ..... !!  ನನಗೆ ಓಡಾಡಲು ಕಷ್ಟವಾಗುತ್ತದೆಂದು ಮತ್ತೆ ಕಾಫೀ ಬೇಡ ಎಂದಿರುತ್ತಾಳೆ ....ನನಗೆ ಗೊತ್ತು ಅವಳ ಮನಸ್ಸು ....!! " ನಿಟ್ಟಉಸಿರು ...ಮತ್ತೇ ಕಣ್ಣೀರು
ಹ್ಞಾ ಹೌದಲ್ಲ ಅವತ್ತು ಅವರು ನೀರು ಕುಡಿದ್ದಿದು ನೆನಪಾಯಿತು ....ಎಷ್ಟು ಕಾಫೀ ತರುತ್ತೇನೆಂದು ಹೇಳಿದರೂ ನೀರೇ ಬೇಕೆಂದು ಹಠ ಮಾಡಿ ಕುಡಿದ ಆಯಮ್ಮನ ಬಗ್ಗೆ ಆದಿನ ಎಂತಹ ಹೆಂಗಸು ,ಆತ ಅಷ್ಟು ಪ್ರೀತಿ ತೋರಿದರೂ ಕೇಳುತ್ತಿಲ್ಲವಲ್ಲಾ ಅನಿಸಿದ್ದು ನೆನಪಾಯಿತು ..... ಬೇಡ ಎಂದು ನೀರು ಕುಡಿದ ಹಿನ್ನಲೆಗೂ ಪ್ರೀತಿಯೇ ಕಾರಣ ಎಂದು ಈಗ ಅರಿವಾಯಿತು....ಛೇ .... ಎಲ್ಲ ವಿಷಯದಲ್ಲೂ ದ್ರಷ್ಟಿ ಗೆ ನಿಲುಕದ ಚಿತ್ರ ಒಂದಿರುತ್ತದೆ ... ಮತ್ತೆ ಏನೋ ಅಪರಾಧಿ ಭಾವ ....
ನನ್ನೆಲ್ಲ ಯೋಚನೆಗಳಿಗೆ ಕಡಿವಾಣ ಹಾಕಿ ಕಣ್ಣೀರು ಒರೆಸುತ್ತಾ  ಆತ ಮುಂದುವರೆದ " ಆ ನೀರೇ ಅವಳಿಗೆ ಗಂಗಾಜಲ  ಆಯಿತೋ ಏನೋ ಎಂಬಂತೆ ಮನೆಗೆ ಹೋಗುವ ಮೊದಲೇ ಏನಾಯಿತೋ ಕಾಣೆ ಹಾರ್ಟ್ ಅಟ್ಯಾಕ್ ಆಗಿ ಅವಳ ಜೀವ ನನ್ನ ಜೀವದೊಂದಿಗೆ ಬೇರೆ ಆಯಿತು ..... ಆದರೆ ಅವಳ ಆತ್ಮಕ್ಕೆ ಓಂಟಿ ಎಂಬ ಭಾವನೆ ಬರಬಾರದಲ್ಲ ಒಂದೊಮ್ಮೆ ಈ ಸಮಯಕ್ಕೆ ಅವಳು ಇಲ್ಲಿಗೆ ಬಂದರೆ ಎಂದು ನಾನು ಇಲ್ಲಿಗೆ ಬಂದೆ ......."

ನಾನಂತೂ ದಂಗು !!!!! "ಹ್ಞಾ !!! ಮತ್ತೆ ಡೈವೋರ್ಸ್ ಎಂದಿರಿ ....!!!?????"

"ಹೌದಪ್ಪ ಇದು ದೇವರು ನೀಡಿದ ಡೈವೋರ್ಸ್ .....ಡೈವೋರ್ಸ್ ಜೀವಿಗಳನ್ನು ಬೇರೆ ಮಾಡಬಹುದು ಆದರೆ ಮನಸ್ಸುಗಳ್ಳನ್ನು ,ಬೆಸೆದ ಭಾಂದವ್ಯಗಳನ್ನು ,ಒಡನಾಡಿದ ನೆನಪುಗಳನ್ನು ದೂರಮಾಡಲು ಸಾಧ್ಯವೇ ??!!! ,ನನಗೆ ಈ ಡೈವೋರ್ಸ್ ಬೇಕಾಗಿರಲಿಲ್ಲ .... ಆದರೆ ಜೀವನದ ಯಾವುದೋ ಒಂದು ಹಂತದಲ್ಲಿ ಒಮ್ಮೆ ಹಾಗೆಲ್ಲೋ ಯೋಚಿಸಿರಬೇಕು ಬಹುಷಃ ,ಅದರ ನೋವು ಈಗ ಅನುಭವಿಸುತ್ತಿದ್ದೇನೆ ...."

ನನ್ನ ಮನಸ್ಸಲ್ಲಿ ಅಪರಾಧೀ ಭಾವ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗಿ ಚುಚ್ಹುತ್ತಿತ್ತು  "ಅಲ್ಲ ಅಂಕಲ್ ,ಅವರೊಂದಿಗೆ ಜೀವಿಸಲು ಸಾಧ್ಯವಿಲ್ಲ  ಎಂದಾದಾಗ ಬೇರೆಯಾಗಿ ಸಂತೋಷವಾಗಿರುವುದು ಯೋಗ್ಯವಲ್ಲವಾ ? ಇರುವ ಒಂದು ಜೀವನವನ್ನು ಸಂತೋಷವಾಗಿ ಕಳೆಯಬಹುದಲ್ಲವೇ ???!!!"

"ಇರಬಹುದಪ್ಪಾ ....ಮತ್ತೊಂದು ಜೀವಿಯೊಂದಿಗೆ ಬದುಕಲೇ ಸಾಧ್ಯವಿಲ್ಲ ಎಂದಾದಾಗ ,ಮುಳುಗೇ ಬಿಡುತ್ತೇವೆ ಎಂದಾದಾಗ ಹೊರಬರುವುದು ಯೋಗ್ಯ ,ಆದರೆ ಕ್ಷುಲ್ಲಕ ಕಾರಣಗಳಿಗೆ ಸಂಬಂಧಗಳನ್ನು ದೂರವಾಗಿಸುವ ನಿರ್ಧಾರ ಸಮಾಜಕ್ಕೆ ಹಿತವಲ್ಲ ..... ಅಂತಹ ಸಂದರ್ಭದಲ್ಲಿ ವಿಚಾರಿಸಿ,ಸಮಾಲೋಚಿಸಿ ಇಬ್ಬರೂ ಒಬ್ಬರಿಗೊಬ್ಬರು ಅನುನಯಿಸಿಕೊಂಡು ಹೋಗುವ ನಪ್ರಯತ್ನ ಮಾಡಿದರೆ ಒಳ್ಳೆಯದು ....ನಮಗಾಗಿ ಒಂದು ಜೀವವನ್ನು ಪರಮಾತ್ಮ ಕಳುಹಿಸಿಕೊಟ್ಟಿದನಲ್ಲ ಅದಕ್ಕೆ ಸಂತೋಷ ಪಡಬೇಕು ...ಎಷ್ಟೋ  ಜನಕ್ಕೆ ಆ ಭಾಗ್ಯ ಕೂಡಾ ಇರುವುದಿಲ್ಲ .... ಯಾರೂ ಪರಿಪೂರ್ಣರಲ್ಲ ,ಹೇಗೆ ಎಲ್ಲವು ನಮ್ಮಿಚ್ಚೆಯಂತೆ ಆಗುವುದಿಲ್ಲವೋ ಹಾಗೆ ಯಾರು ಸಂಪೂರ್ಣವಾಗಿ ನಮ್ಮಿಚ್ಚ್ಚೆಯಂತೆ ಇರುವುದಿಲ್ಲ .... ನಮಗೆ ಬೇಕಾದಹಾಗೆ ಅವರಿರಬೇಕು ಎನ್ನುವಾಗ ಅವರಿಗೆ ತಕ್ಕ ಹಾಗೆ ನಾವಿದ್ದೇವೆಯೇ ಎನ್ನುವ ಪ್ರಶ್ನೆ ಮೂಡುತ್ತದೆ ..... ಪರಸ್ಪರರ ಭಾವನೆಗೆ ಸ್ಪಂದಿಸಿದರೆ ಈ ದೂರ,ಹತ್ತಿರ ಎನ್ನುವ ಪ್ರಶ್ನೆಯೇ ಮೂಡುವುದಿಲ್ಲ ..... ಅವರವರ ಕರ್ತವ್ಯ ಮುಗಿದಾಗ ಜೋಡಿಸಿದ ಆ ದೇವರೇ ಡೈವೋರ್ಸ್ ಕೊಡಿಸುತ್ತಾನೆ ...ಈಗ ನಮಗೆ ಕೊಡಿಸಿದ್ದಾನಲ್ಲಾ ಹಾಗೆ... :( ನನಗೆ ಬೇಕಿರಲಿಲ್ಲ ಈ ಡೈವೋರ್ಸ್ .....ಹೇಗೆ  ತಂದೆ ,ತಾಯಿಗೆ ಇಂಥವರೇ ನಮ್ಮ ಮಕ್ಕಳಾಗಿ ಹುಟ್ಟಲಿ ಎಂಬ ಆಯ್ಕೆ ಇರುವಿದಿಲ್ಲ ,ಹಾಗೆ ಹುಟ್ಟಿದ ಮಕ್ಕಳು ನಮಗೆ ಹೊಂದಿಕೆ ಅಗಲ್ಲಿಲ್ಲ ಎಂದು ಪ್ರತಿಯೊಬ್ಬರ ತಂದೆ ತಾಯಿ ಮಕ್ಕಳನ್ನು ಅಗಲಿದ್ದಾರೆ ಏನಾಗುತ್ತಿತ್ತು ಯೋಚಿಸು... !!! ನಮಗೆ ಇಂಥದ್ದೊಂದು ಸುಂದರ ಜೀವನ ನಡೆಸಲು ಸಾಧ್ಯವಾಗುತ್ತಿತ್ತೇ ???!!! ಆದರೆ ಅವರು ಹಾಗೆ ಮಾಡದೇ ಪ್ರೀತಿಯಿಂದ ಸಾಕಿ ಸಲಹಿ ಒಂದು ಸುಂದರ ಜೀವನವನ್ನು ರೂಪಿಸಲು ಸಹಕರಿಸುತ್ತಾರೆ ,ಅದೇ ರೀತಿ ನಾವೂ ಪರಸ್ಪರರ ಭಾವನೆಗೆ ಸ್ಪಂದಿಸಿ ಆ ಪ್ರೀತಿಯನ್ನು ಬೆಳೆಸಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ...ಪ್ರೀತಿ ಯಾವಾಗಲು ಸುಂದರ ,ಪ್ರೀತಿ ಇದ್ದಲ್ಲಿ ಎಲ್ಲವು ಚೆಂದವಾಗಿರ್ತದೆ ...ಅದೇ ಪ್ರೀತಿಯಿಂದ ದೂರವಾದಾಗ ಎಲ್ಲವೂ ಆಪೂರ್ಣ ಎನಿಸಿಬಿಡುತ್ತದೆ ...ಈಗ ನನ್ನ ಹಾಗೆ"

"ಇರಲು ಜೊತೆಗೆನ್ನ ಜೀವ ,ಜಗತ್ತು ಸುಂದರ ಎಂಬ ಭಾವ "...ನಿಟ್ಟಿಸುರು ...

ನನ್ನ ಹೃದಯ ಹಗುರಾಗಿತ್ತು ....ಅಪರಾಧೀಭಾವದಿಂದ ಕುದಿಯುತ್ತಿದ್ದ ಮನಸ್ಸಿಗೆ ತಂಪಾದ ಭಾವ ಮೂಡಿಸಿತ್ತು ಇವರ ಮಾತು ಮತ್ತು ಸಂಜೆಯ ತಂಪು ತಂಗಾಳಿ ...ಆಗಸದಲ್ಲಿ ಮುಳುಗಿದ ಸೂರ್ಯ ನನ್ನ ಮನಸಲ್ಲಿ ಉದಯಿಸುತ್ತಿದ್ದ ....ಮತ್ತೆ ಹೊಸ ಕಿರಣ ,ಹೊಸ ಮುಂಜಾವು ...ತಿಳಿಯಾದ ಮನಸ್ಸು ...ಗುರಿ ಸ್ಪಷ್ಟವಾಗಿತ್ತು

ಜೊತೆಯಿರಲು ನೀನು ,ಮರೆವೆನು ಜಗತ್ತನ್ನೇ ನಾನು ......
              ಕಲ್ಲಿರಲಿ ,ಹೂವಿರಲಿ ,ಮುಳ್ಳಿರಲಿ ,ಮಂಜಿರಲಿ ........
                         ನಡೆಯೋಣ ಹೊಸಗನಸ ಹೆಗಲೇರಿಸಿ ........
                           ಪ್ರೀತಿ ತೋರಿದ ದಾರಿಯಲಿ  .........
                                 ಕಣ್ಣಲ್ಲಿ ಅದೇ ಬೆಳಕು ,ಮನದಲ್ಲಿ ಅದೇ ಪ್ರೀತಿ .....
                                         ಚಿಮ್ಮುತಿರಲಿ,ಹೊಮ್ಮುತ್ತಿರಲಿ ,ಎಂದಿಗೂ ಹಸಿರಾಗಿರಲಿ
                                                     ಜೊತೆಯಿರಲು ನೀನು ,ನನಗೇನು ಬೇಕು ಇನ್ನು.....
                                                                ಮರೆವೆನು ಜಗತ್ತನ್ನು ಇನ್ನು ನಾನು ........


.Note : inspired by :
 http://timesofindia.indiatimes.com/life-style/relationships/man-woman/Gurgaons-silliest-reasons-for-divorce/articleshow/29503387.cmsThursday, January 14, 2016

~~~~~ ಆನಂದಮಯ~~~~~~
ಮೋಡ  ಕವಿದ ಆಕಾಶ .... ಈಗಲೋ  ಆಗಲೋ ಮಳೆ ಬರುವಂತಿತ್ತು ... ಬದುಕಿನ ಪ್ರತಿಬಿಂಬವೋ ಎಂಬಂತೆ ಗುಡುಗು ಸಿಡಿಲುಗಳಂತ ಆತಂಕದ ನಡುವೆ ತಣ್ಣಗೆ ಬರುವ ಮಳೆ ಮನಸ್ಸಿಗೆ ತಂಪೆರದಂತೆ .... ಸಮಸ್ಯೆಗಳೆಂಬ ಆತಂಕಗಳ ನಡುವೆ ಅಲ್ಲೆಲ್ಲೋ ಮೋಡಗಳ  ನಡುವೆ ಆಗಾಗ  ಇಣುಕುವ  ಸೂರ್ಯನಂತೆ ಭರವಸೆ ಎನ್ನುವ ಬೆಳಕು ಕಣ್ಣು ಮುಚ್ಚಾಲೆ ಆಡುತ್ತಿತ್ತು ...ಆದರೆ ಯಾರಿಗೆ ಗೊತ್ತಿತ್ತು ಇವತ್ತಿನ ಮಳೆ ನನ್ನ ಬದುಕಲ್ಲಿ ಕಾಮನಬಿಲ್ಲು ಸ್ರಷ್ಟಿಸುವುದು ಎಂದು ....!!!ನಾನೇನೋ ಪ್ರತಿದಿನದಂತೆ ಮತ್ತೊಂದು ಪ್ರವಾಹ/ಪ್ರಳಯದ ನೀರಿಕ್ಷೆಯಲ್ಲಿ ನಡುಗುತ್ತಲಿದ್ದೆ ...ಆದರೆ ಯಾವುದೋ ಕುರಿಯ ಉಣ್ಣೆ ಇನ್ನ್ಯಾರದೋ ಕಂಬಳಿ ಆದಂತೆ ....ಎಲ್ಲೋ ಆರಿದ ನೀರು ಮಳೆ ಆಗಿ ಇನ್ನೆಲ್ಲೋ ಬಾಯಾರಿದ ಬಾಯಿಗೆ/ಭೂಮಿಗೆ ನೀರೆರೆದಂತೆ .... ಪ್ರಕೃತಿಯ ಲೆಕ್ಕಾಚಾರ ಅರಿತವರಾರು !!!????

ನನ್ನ ಬದುಕಿಗಂತೂ ಮಳೆ ಕೊಳೆ ಓಡಿಸುವ ನೆಪದಲ್ಲಿ ಚಿಕ್ಕ ಪುಟ್ಟ ಜೀವಿಗಳ ಗೂಡುಗಳನ್ನೇ ನಾಶಮಾಡುವ ಪ್ರಳಯಾಂತಕ ....!!!!

ಎರಡು ದಿನ ಎಡಬಿಡದೆ ಹಿಡಿದ ಜ್ವರ ಹಾಗೂ ಎಡಬಿಡದೆ ಸುರಿದ ಮಳೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು ....ಎರಡು ದಿನವಾದರೂ ಮಾರಾಟವಾಗದೇ ಕೊಳೆಯುತ್ತ ಬಿದ್ದಿದ್ದ ಹೂವನ್ನು ಹೊಟ್ಟೆಗೆ ಹಿಟ್ಟಿಲ್ಲದ  9  ವರ್ಷದ  ಮಗ ಹೇಗಾದರೂ ಮಾರಿ ಬರುತ್ತೇನೆ ಎಂದು ಹೋದವ ಇನ್ಯಾವುದೋ ಮಾಯೆಯಲ್ಲಿ ಕೊಳವೆ ಬಾವಿಗೆ ಬಿದ್ದು ಹೆಣವಾಗಿ ಬಂದಿದ್ದ ...ಅದೇ ಹೂ ಅವನ ಮೇಲೆ ತಣ್ಣಗೆ ಮಲಗಿತ್ತು .... 

ಇದ್ದೊಬ್ಬ  ಮಗನನ್ನು ನುಂಗಿ ನೀರಾಗಿತ್ತು ಮಳೆ ....!!!

ಬದುಕಲು ನನಗೆ ಏನೂ ಗುರಿ ಇಲ್ಲ ಈಗ ..ಗ಼ುರಿ ಬೇಕಾಗಿಯೂ ಇರಲಿಲ್ಲ ..... ಆದರೆ ಸಾಯುವತನಕ ಬದುಕಬೇಕಲ್ಲಾ ಅಥವಾ ಸಾಯುವುದಕ್ಕಾದರೂ ಬದುಕಬೇಕಲ್ಲ ..... ತೇನವಿನಾ ತ್ರಣಮಪಿ ನ ಚಲತಿ ತೇನವಿನಾ!!!!  ಪಕ್ಕದ ಮನೆಯ ರೇಡಿಯೋ ಹಾಡುತ್ತಿತ್ತು ...... 

ಅದಾಗಿ 6 ತಿಂಗಳು ....  ಮತ್ತದೇ ಮಳೆ ....  ಮತ್ತದೇ  ಸಂಜೆ ... ಮತ್ತದೇ ಆತಂಕ ...!!!ಪಕ್ಕದ ಮನೆಯ ಗಿರಿಜಮ್ಮನ ಒತ್ತಾಯಕ್ಕೆ  ಅವಳ ಜೊತೆ ಹೊರಟಾಗಿತ್ತು ..... 

ಗೋಕುಲದ ನಂದನವನ ಚಿತ್ರಿಸುವ ಪುಟ್ಟ ಪುಟ್ಟ ಹೆಜ್ಜೆಗಳು ... ತೊದಲು ನುಡಿಗಳು ... ಮುಂಜಾನೆಯ ಮಡಿಲಲ್ಲಿ ಮೆಲ್ಲಗೆ ಕಣ್ಣು ಬಿಡುವ ಹೂ ಪಕಳೆಗಳಂತಹ ಕಣ್ಣುಗಳು ... ಬಂದು ನಿಂತಿದ್ದು "ಆನಂದಮಯ" ಅನಾಥಾಲಯದ ಎದುರಿಗೆ ..... ಗಿರಿಜಮ್ಮನ ಮನೆಗೆಲಸದ ಒಡತಿ ಸ್ಥಾಪಿಸಿದ ಅನಾಥಾಲಯಕ್ಕೆ ಇದ್ದ "ಆಯಾ" ಅವಶ್ಯಕತೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತ್ತು ......!!!

ಪುಟ್ಟ ಪುಟ್ಟ ಕಂದಮ್ಮಗಳ ಕೇಕೆ ....ಎದುರಿಗೆ ಆನಂದಮಯ........ ಹಾಗೂ ಮಳೆ ಬಿಟ್ಟುಹೋದ ಕಾಮನಬಿಲ್ಲು ......!!!!

Saturday, November 15, 2014

ಕಲ್ಪನೆಗೊಂದು ಆಕಾರ

                            
1. By Using Invitation card :
     
      2. By Using News Paper :


      2. By Using Pista Shell Flower:

             


3.Using Quilling paper and CD


Friday, February 21, 2014

"ತೊರೆದರು ತನ್ನ ತೊರೆಯದು ಪ್ರಿಯನಾ"

                                            
ವಿಶಾಲವಾಗಿ ಹರಡಿಕೊ೦ಡಿರುವ ಈ ಸಮುದ್ರ,ತಾ ಮು೦ದು ತಾ ಮು೦ದು ಎ೦ದು ಎಡಬಿಡದೆ ದಡವನ್ನು ಬ೦ದೊಪ್ಪುವ ಅಲೆಗಳು,ಆ ಒಪ್ಪ್ಪುಗೆಗೆ ನಾಚಿಕೆಯಿ೦ದ ಒದ್ದೆಯಾದ ಮರಳು,ಕೆನ್ನೆ ಕೆ೦ಪಾಗಿಸಿಕೊ೦ಡ ಮುಗಿಲು,ಬಣ್ಣಗಳ ಈ ಒಕುಳಿಗಳ ನಡುವೆ ಅ೦ದಿನ ಕಾಯಕ ಮುಗಿದ ಹಾಗೆ ಅಸ್ತ್೦ಗತನಾಗುವ ಸೂರ್ಯ...ಯಾವುದು ನಮಗೆ ಹೊಸತಲ್ಲಾ...ಚಿಕ್ಕವರಿದ್ದಾಗಿ೦ದ ಸಮುದ್ರದ ದಡವನ್ನೇ ಆಟದ ಅಂಗಳವಾಗಿಸಿಕೊಂಡು ಬೆಳೆದವರು....ತುಂಬಾ ಕಾಲದ ನಂತರ ನನ್ನ ಬದುಕಿನ ಈ ಇಳಿಸಂಜೆಯಲಿ ಇಲ್ಲಿ ಬಂದು ಕೂತಿದ್ದರೂ ಆ ಚಿತ್ರಣ ಬದಲಾಗಿರಲಿಲ್ಲ....

ಅಬ್ಬಾ! ಈ ಕಡಲಿನ ಮೊರೆತ ನನ್ನ ಕೊರೆತ ತುಂಬ ಜೊರಾಗಿ ಅಪ್ಪಳಿಸುತ್ತಾ ಇದೆ ಅಂತಾ ನೀವು ಯೋಚಸ್ತಾ ಇದ್ದರೆ Track ಗೆ ಬಂದು ಬಿಡ್ತೀನಿ...ನಾನು ಶರಧಿ ಇಲ್ಲಿ ನಾನು ಕಾಯ್ತಾ ಇರೋದು ನನ್ನ ಬಾಲ್ಯದ ಗೆಳತಿ ಶ್ರಾವಣಿಗೋಸ್ಕರ....

ತುಂಬಾ ವರ್ಷಗಳ ನಂತರ ಅದೂ ನಿಮ್ಮ ಜೀವನ ಎಲ್ಲ ರೀತಿಯ ಸುಖ ದುಃಖಗಳನ್ನು ನೋಡಿ ಖಾಲಿ ಖಾಲಿ ಎನಿಸುವಾಗ ನಿಮ್ಮ ಬಾಲ್ಯದ ಆತ್ಮೀಯ ಸ್ನೇಹಿತರ ಪುನರಾಗಮನ ಜೀವನದ ಇಳಿಸಂಜೆಗೆ ಒಂದು ರೀತಿಯ ಉತ್ಸಾಹದ/ಹೊಸ ಚೇತನದ ರಂಗು ತುಂಬಿಬಿಡುತ್ತೆ......

ಬಹುಶಃ ಶ್ರಾವಣೀ - ಶ್ಯಾಮ್ ಗೆ ಕೂಡ ನನ್ನ ಹಾಗೆ ಮಕ್ಕಳಿದ್ದು ವಿದೇಶಗಳಲ್ಲಿ ನೆಲೆಸಿರಬಹುದು...ಅವಳಿಗೂ ಅಲ್ಲಲ್ಲಿ ತಲೆಕೂದಲು ಬೆಳ್ಳಗಾಗಿರಬಹುದೇನೋ,.......ಹೀಗೆ ಯೋಚನೆಗಳ ಮಹಾಪೂರದಲ್ಲಿ ನಾನಿರುವಾಗ ಎಲ್ಲದಕ್ಕೂ ಉತ್ತರವೋ ಎಂಬಂತೆ ಎದುರಿಗೆ ನಿಂತಿದ್ದಳು ಶ್ರಾವಿ...

ಬೀಸುತಿದ್ದ ತಂಪಾದ ಗಾಳಿ ತುಂಬಾ ಕಾಲದ ನಂತರ ಸಿಕ್ಕ ಆನಂದವನ್ನು ಇಮ್ಮುಡಿಗೊಳಿಸುತಿತ್ತು,...ತುಂಬಾ ದಿನಗಳ ನಂತರ ಸಿಕ್ಕಿದರೆ Flashback ಗೆ ಹೋಗೊದು ಸಹಜ ಅಲ್ಲವಾ!!? ಹಾಗೆ ನಾವು ನೆನಪುಗಳ ರಾಶಿ ಹಾಕಿಕೊಂಡು ಒಂದೊಂದಾಗಿ ಮೆಲಕು ಹಾಕುತ್ತಿರುವಾಗ ತಟ್ಟನೆ ನೆನಪಾಗಿದ್ದು ಶ್ಯಾಮ್ ,"ಶ್ರಾವಿ ನಿನ್ನ ಶ್ಯಾಮ್ ಹೇಗಿದ್ದಾನೆ? ನಿನ್ನ ಮದುವೆಗೂ ಕರೆದಿಲ್ಲ......ಹೀಗೆ ಪ್ರೀತಿಯ ಬ್ಯೆಗುಳ ಸಾಗುತ್ತಲಿತ್ತು ಅಡೆತಡೆ ಇಲ್ಲದೆ...

ಮಧ್ಯದಲ್ಲೆ ಮಾತನ್ನು ತುಂಡರಿಸಿದ ಅವಳು "ನನ್ನ ಮತ್ತು ಶ್ಯಾಮ್ ಮದುವೆ ಅಗಲಿಲ್ಲ ಶರು,ಅವನು ಈಗ ಎಲ್ಲಿದ್ದಾನೋ ,ಹೇಗಿದ್ದಾನೋ ಎನು ನನಗೆ ಗೊತ್ತಿಲ್ಲ...ಅವನು ನನ್ನನ್ನು ಬಿಟ್ಟುಹೋದ ಕಾರಣ ಕೂಡ ನನಗೆ ತಿಳಿದಿಲ್ಲ...ನಾನೂ ಬೇರೆ ಯಾರನ್ನೂ ಮದುವೆ ಆಗಿಲ್ಲ...social work ನನಗೆ ನೆಮ್ಮದಿ, ಸಂತೋಷ,ಈ ಬದುಕಿಗೊಂದು ಬೆಲೆ ಕೊಟ್ಟಿದೆ..ಆದರೆ ನಮ್ಮಿಬ್ಬರ ಅಷ್ಟು ವರ್ಷಗಳ ಒಡನಾಟದಿಂದ ಹೇಳಬಲ್ಲೆ ಶ್ಯಾಮ್ ನನ್ನನ್ನು ಬಿಟ್ಟು ಹೋಗಿದ್ದು ಕೂಡ ಏನೋ ಬಲವಾದ ಅನಿವಾರ್ಯತೆಯೋ ಅಥವಾ ಕರ್ತವ್ಯ ಕಾರಣ..ಅವನಿಗೆ ಈಗ ಮದುವೆ ಅಗಿದ್ದರೂ,ಮಕ್ಕಳಿದ್ದರೂ,ಎಷ್ಟೇ ಸಂತೋಷವಾಗಿದ್ದರೂ,ಒಮ್ಮೆ ಕಣ್ಣಲ್ಲಿ ನೀರು ಬಂದರೆ ಅದು ಈ "ಶ್ರಾವಿ"ಗಾಗಿ ಮಾತ್ರ..." ಎಂದು ಮುಗುಳ್ನಕ್ಕಳು.
ಅವಳ ಮಾತಿನಿಂದ shock ಆಗಿದ್ದು ನನಗೆ "ಅಲ್ಲಾ ಈ ರೀತಿಯ ಪ್ರೀತಿ ಇರಲು ಸಾಧ್ಯವಾ,ಈ ಮಟ್ಟದ ನಂಬಿಕೆ !!...ಶ್ರಾವಿ ಇದೆಂತಾ ಪ್ರೀತಿ ನಿನ್ನದು!?"

"
ನನ್ನ ಪ್ರೀತಿ ರಾಧೆಯ ಪ್ರೀತಿಯ ರೀತಿ ಶರು,ನಿನ್ನನ್ನೆ ನೊಡು ಎಲ್ಲವು ಇದೆ ನಿನಗೆ ಆದರೆ ಎನೂ ಇಲ್ಲದ ಹಾಗೆ ವ್ರದ್ಧಾಶ್ರಮದಲ್ಲಿ
ಇದ್ದೀಯಾ...,ಗಂಡ/ಹೆಂಡತಿ,ಮಕ್ಕಳು..etc ಎಲ್ಲರ ಪಾತ್ರ ಪ್ರತಿಯೊಬ್ಬರ ಜೀವನದಲ್ಲಿ ಇಷ್ಟಿಷ್ಟು ಕಾಲ ಮಾತ್ರ.ಅವರ ಪಾತ್ರ ನಮ್ಮ ಜೀವನದಲ್ಲಿ ಅಷ್ಟೇ ದಿನ..ಅವರ ಪಾತ್ರ ಮುಗಿದಮೇಲೆ ಅಲ್ಲಿ ಇನ್ನು ಬೆರೆ ಯಾವುದೋ ಪಾತ್ರ ಬರಬಹುದು ಅಥವಾ ಹಾಗೆಯೂ ಇರಬಹುದು,ಇದು ಶ್ರೀಕೃಷ್ಣನಿಗೆ ಅಗಲಿ ರಾಧೆಗೆ ಅಗಲಿ ತಪ್ಪಿಲ್ಲ..ಬಹುಷಃ ಕರ್ತವ್ಯದ ಅನಿವಾರ್ಯತೆಯೋ ಅಥವಾ ಪ್ರೀತಿ ಹೀಗೂ ಇರಬಲ್ಲದು ಅಥವಾ ಪ್ರೀತಿಗೆ ಮತ್ತೊಂದು ವಿಶಿಷ್ಟತೆ ಗರಿಗೇರಿಸಲೋ ರಾಧೆಯಿಂದ ದೂರವಾದ ಶ್ರೀಕೃಷ್ಣ….."ಎನ್ನುತ್ತಾ ಮೌನವಾದವಳನ್ನು ನೋಡಿದರೆ ಕಡಲಿನ ಸಹಜತೆ,ವಿಶಾಲತೆ ಮುಖದಲ್ಲಿ ಪ್ರತಿಫಲಿಸುತ್ತಿತ್ತು...

ಶ್ರೀಕೃಷ್ಣ  ಅಷ್ಟೋಂದು  ಪತ್ನಿಯರು,ಮಕ್ಕಳು,ರಾಜ್ಯ,ಸ್ನೇಹಿತರು ಇಷ್ಟೇಲ್ಲಾ ಸುಖಗಳ ಮಧ್ಯದಲ್ಲಿ ಕಣ್ಣೀರು ಇಟ್ಟಿರಬಹುದೇ!!!? ಒಂದೊಮ್ಮೆ ಇಟ್ಟಿದ್ದರೂ ಅದು ಅವನ ರಾಧೆಗಾಗಿ ಮಾತ್ರವೇ !!? ಅಥವಾ ಮುಂದಿನ ಜೀವನವನ್ನು ಸಮರ್ಥವಾಗಿ ಎದುರಿಸಲು ರಾಧೆ ತನಗೆ ತಾನೇ ಮಾಡಿಕೊಂಡ ಸಾಂತ್ವನವಿರಬಹುದೇ!!!? ಅಥವಾ ಪ್ರೀತಿಗೆ ನಂಬಿಕೆಯೆ ಬುನಾದಿ ಎನ್ನುವಂತೆ ಇದು ಕೇವಲ ರಾಧೆಯ ನಂಬಿಕೆಯೋ!!!?.....ಹಿಗೆ ನನ್ನ ಮನಸ್ಸಿನಲ್ಲಿ ನೂರಾರು ತಳಮಳಗಳ/ಪ್ರಶ್ನೆಗಳ ಅಲೆಗಳ ಹೊರಾಟ ತಾ ಮುಂದು ತಾ ಮುಂದು ಎಂದು.....

ಇದು ಬಹುಷಃ ನನ್ನಂತಹ ಸಾಮಾನ್ಯಳಿಗೆ ಪೂರ್ಣವಾಗಿ ಅರ್ಥವಾಗದ್ದು ಏಕೆಂದರೆ ಇದು ರಾಧೆಯ ಪ್ರೀತಿಯ ರೀತಿ,
ತೊರೆದರು ತನ್ನ ತೊರೆಯದು ಪ್ರಿಯನಾ.........ಇದು ರಾಧೆಯ ಪ್ರೀತಿಯ ರೀತಿ......


Tuesday, March 26, 2013

ಎಲ್ಲಾ ನೋಟಗಳಾಚೆಗೊಂದು ಚಿತ್ರವಿದೆ ....!!!! 
  "ಬದುಕು ಅನ್ನೋ ಕಾಮನಬಿಲ್ಲು ಪೂರ್ಣ ಆಗೋದಿಕ್ಕೆ ಎಲ್ಲಾ ಬಣ್ಣ ಬೇಕು .... ಅದೇ ರೀತಿ ಎಲ್ಲಾ ಬಣ್ಣಗಳಾ ಜೊತೆ ನನ್ನ ಒಡನಾಟ ಶುರುವಾಯಿತು... ಕೆಲವು ಬಣ್ಣಗಳ ಹಿಂದೆ ನಾನು ಓಡಿದರೆ ಕೆಲ ಬಣ್ಣಗಳು ನನ್ನ ಓಡಿಸಿದವು .... ನನಗೆ ನನ್ನ ಕಾಮನಬಿಲ್ಲು ಮುಖ್ಯ ಆಗಿತ್ತು ... ಈ ನನ್ನ ಬದುಕಿನ ಇಳಿಸಂಜೆಯಲಿ  ಒಮ್ಮೆ ತಿರುಗಿ ನೋಡಿದರೆ ಎಷ್ಟೋ ಬಣ್ಣಗಳನ್ನ ಬಿಟ್ಟು ಬಂದಿದೀನಿ ಅನಿಸುತ್ತಾ  ಇದೆ ನಂದಿನಿ... ಈಗ ನನ್ನ ಕಾಮನಬಿಲ್ಲು ಪೂರ್ಣ ಆಗಲು ಒಂದೇ ಒಂದು ಬಣ್ಣ ಬೆಕು.."ನೆಮ್ಮದಿ" !!!
ಅದಿಲ್ಲದೇ ನನ್ನ   ಕಾಮನಬಿಲ್ಲು ಅಪೂರ್ಣ .......!!!"

ಇವರ ಮಾತನ್ನು ಕೇಳಿ ನನಗಂತೂ ಆಶ್ಚರ್ಯ !!!! ಏನೇನಿಲ್ಲ,ಏನೇನು ಸಾಧಿಸಿಲ್ಲ,ಎಲ್ಲವು ಇದೆ. ಆದ್ರೆ ಇವರು ಮಾತ್ರ ನೆಮ್ಮದಿ ಇಲ್ಲ ಅಂತಾರಲ್ಲ ... !!!

"ಅಲ್ಲಾ  ಮನುಷ್ಯನಿಗೆ ಎಲ್ಲ ಇದ್ದು ಏನು ಇಲ್ಲ ಅಂತ ಅನಿಸುವುದು/ಕಾಡುವುದು  ಬಹುಷ್ಃ  ಬದುಕಿನ ಇಳಿಸಂಜೆಯಲಿ" ಈ  ಎಲ್ಲ ಯೋಚನೆಗಳಿಂದ ಹೊರಬಂದು ಕೇಳಿದ್ದು "ಯಾಕೆ ,ಏನಾಯ್ತು ಅಂಕಲ್ ?"

"ನನ್ನ ಅಮ್ಮ ಅಪ್ಪಂಗೆ ಅವರ ಇಳಿ ವಯಸ್ಸಿನ್ನಲ್ಲಿ ನನ್ನ ಅವಶ್ಯಕತೆ ತುಂಬಾ ಇತ್ತು  ನಂದಿನಿ..ಆದರೆ ನಾನು ಮಾತ್ರ ಅಂದಿನ ನನ್ನ  ನಾಳೆಗಳಿಗೆ  ಬಣ್ಣ ತುಂಬುವ .... ನನ್ನ ಕಾಮನಬಿಲ್ಲಿನ  ಪೂರ್ಣತೆಗೆ ಗಮನ ಹರಿಸಿದ್ದೆ ..... ಎಂದೂ ಎಣಿಸಿರಲಿಲ್ಲ ಈ "ಕರ್ತವ್ಯ " ಎಂಬ  ಬಣ್ಣ ಇಷ್ಟೊಂದು ಕಾಡುತ್ತದೆ ಎಂದು ... ಈಗ ನನ್ನ ಕಾಮನಬಿಲ್ಲು ಎಂದು ಪೂರ್ಣವಾಗಲು ಸಾಧ್ಯವಾಗದ ಬಣ್ಣಕ್ಕಾಗಿ ಕಾಯುತ್ತಿದೆ ...... :( ಮನುಷ್ಯ  ತನ್ನ  ದ್ರಷ್ಟಿಗೆ/ನೇರಕ್ಕೆ ನಿಲುಕಿದ್ದನ್ನೆ ನೋಡುವುದು ಮತ್ತು ಮಾಡುವುದು .. 
ಎಲ್ಲಾ ನೋಟಗಳಾಚೆಗೊಂದು ಚಿತ್ರವಿದೆ ನಂದಿನಿ..!!! ನೋಡುವವರ ದ್ರಷ್ಟಿಗೆ ನಿಲುಕಿದ್ದು ....... !!!!!!"


*******************************