Monday, August 29, 2016

ಹಬ್ಬಿ ನಗಲಿ ಪ್ರೀತಿ ...........................


( ಆಕಾರಕ್ಕೊಂದು  ಅವತಾರ :) ರವಿ ಮಡೋಡಿ  ಕ್ಯಾಮರಾ ಕಣ್ಣಿನಿಂದ ಸೆರೆ ಹಿಡಿದ ಆಕಾರಕ್ಕೊಂದು ಅವತಾರ ಕೊಡುವ ಪ್ರಯತ್ನ :) ಚಿತ್ರಕ್ಕೊಂದು ಕತೆ :) ) ಹಬ್ಬಿ ನಗಲಿ ಪ್ರೀತಿ ...........................



ಇವತ್ತು ಏನಾದರೂ ಆಗ್ಲಿ ,ಅವಳಿಗೆ ಹೇಳಲೇಬೇಕು ಎಂದು ನಿರ್ಧಾರ ಮಾಡಿ ಆಗಿತ್ತು ...ಆದರೆ ಇದೇಕೆ ನನಗೆ ತಳಮಳ ..... ಏನೋ ತಪ್ಪು ಮಾಡುತ್ತಿರುವ ಅಪಾರಧಿ ಭಾವ .... ಈಗಿನ ಕಾಲದಲ್ಲಿ ಇದೆಲ್ಲ ಎಷ್ಟು ಸಹಜ ,ದಿನ ಬೆಳಗಾದ್ರೆ ದಿನಪತ್ರಿಕೆಗಳಲ್ಲಿ ಎಷ್ಟೊಂದು ಸುದ್ದಿ ಈ ತರಹದ್ದಿರುತ್ತದೆ ..... ಎಂತೆಂಥ ಚಿತ್ರನಟರೆ ಮಾಡುವಾಗ  ನಾನೊಬ್ಬನೇ ತಪ್ಪಾಗಿ ಯೋಚಿಸುತ್ತಿಲ್ಲವಲ್ಲ , ಇನ್ನು ಸಾಧ್ಯವಿಲ್ಲ ...ನನಗಿರುವ ರೂಪ ,ಹಣ ,ಕೆಲಸಕ್ಕೆ ಎಂತೆಂಥವರೋ ಸಿಗಬೇಕಿತ್ತು ,ಆದರೆ ಬುದ್ಧಿ ಇಲ್ಲದೆ ಅಥವಾ ಅಪ್ಪ ಅಮ್ಮನ ಮಾತಿಗೆ ಕಟ್ಟುಬಿದ್ದು ಅವಳನ್ನು ಕಟ್ಟಿಕೊಂಡು ದೊಡ್ಡ ತಪ್ಪು ಮಾಡಿದೆ..... ಈಗ ನಾನು ಮಾಡುತ್ತಿರುವುದು ಸರಿಯಾದ ಕ್ರಮ ..... ಅವಳಿಗೂ ಯಾರಾದರೂ ಅವಳಂತವರೇ ಸಿಗುತ್ತಾರೆ ಮುಂದೆ ಜೀವನದಲ್ಲಿ .....ಸ್ವಂತದ್ದೆಂಬ ನಿರ್ಧಾರವನ್ನೇ ಮಾಡದ ಪ್ರತಿಯೊಂದಕ್ಕೂ ತನ್ನನ್ನೇ ಅವಲಂಬಿತಳಾಗಿರುವ ಅವಳನ್ನು ನೋಡಿದಾಗಲ್ಲೆಲ್ಲ ಒಂದುಬಗೆಯ ಹಿಂಸೆ ....ಎಲ್ಲರ ಮನೆಯಲ್ಲೂ ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ ,ಇವಳ ರೀತಿ ಮನೆಯಲ್ಲಿ ಸುಮ್ಮನೆ ಕಾಲ ಕಳೆಯುತ್ತಿಲ್ಲ ......ಇವಳ ಜೊತೆಯಿದ್ದರೆ ಜೀವನ ಎಂದಿಗೂ ಸುಂದರವಾಗಲು ಸಾಧ್ಯವಿಲ್ಲ ,ನಾನೇ ತಪ್ಪು ತಿಳಿದಿದ್ದೆ ಇಷ್ಟು ದಿನ ,ಈ ಜೀವನ ಇವಳ ಜೊತೆ ಎಷ್ಟು ಸುಂದರ ಎಂದು ,ಆದರೆ ಗೆಳೆಯ ಸುಂದರ್ ಜೀವನ ಕಂಡಾಗ ನನ್ನದು ಎಂತಹ ಜೀವನ ಎನಿಸುತ್ತಿದೆ ....ಅವನ ಹೆಂಡತಿ ಹೇಗೆ ಎಲ್ಲ ಪಾರ್ಟಿ ಗಳಿಗೂ ಬಂದು ಎಲ್ಲರ ಜೊತೆ ಎಷ್ಟು ಸೋಶಿಯಲ್ ಆಗಿ ಇರುತ್ತಾಳೆ ,ಆದರೆ ಇವಳು ...... ಛೇ ...ಇನ್ನು ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ,
ಇವತ್ತು ಇವಳಿಂದ ಡೈವೋರ್ಸ್ ಗೆ ಸೈನ್ ಹಾಕಿಸಿಕೊಳ್ಳಲೇಬೇಕು ,ಏನಾದರೂ ಆಗಲಿ ..... ಯೋಚನಾಗತಿಯಲ್ಲಿ ಮನೆಯ ಹತ್ತಿರ ಬಂದಿದ್ದೆ ತಿಳಿಯಲ್ಲಿಲ್ಲ ...ಆದ್ರೆ ಯಾಕೋ ಮನೆಯ ಒಳಗೆ ಹೋಗಲು ಮನಸ್ಸು ಒಪ್ಪುತ್ತಿಲ್ಲ ,ಏನೋ ಅಪರಾಧಿ ಭಾವ ಕಾಡುತ್ತಿದೆ ...ಹತ್ತಿರದಲ್ಲಿರುವ ಪಾರ್ಕ್ ಲ್ಲಾದರೂ ಸ್ವಲ್ಪ ಸಮಯ ಕುಳಿತು ಹೋದರಾಯಿತು ಎಂದು ಪಾರ್ಕ್ ಗೆ ಬಂದರೇ ...... ಅರೇ ಇದೇನಿದು ಅದೇ ಚಿರಪರಿಚಿತ ಮುಖ ,ಅದೇ ದಿನಾಲೂ ನೋಡುವ ವಯಸ್ಸಾದ ಮನುಷ್ಯ ,ಏನೋ ದುಃಖದಲ್ಲಿ ಕುಳಿತಂತೆ ಕಾಣುತ್ತಿತ್ತು ....ಏನಾಶ್ಚರ್ಯ ಅವರ ಜೊತೆ ಯಾವಾಗಲು ಇರುತ್ತಿದ್ದ ಅವರ ಹೆಂಡತಿ ಕಾಣುತ್ತಿಲ್ಲವಲ್ಲ .....ಖುಷಿಯಾಗಿರುವುದು ಬಿಟ್ಟು ದುಃಖಿಸುತ್ತಿದ್ದಾನಲ್ಲ ಮುದುಕ .... ಯಾವಾಗಲೂ ಜೊತೆಯಾಗಿ ಓಡಾಡುತ್ತ ,ಸುತ್ತಲ ಜಗತ್ತೇ ಮರೆತವರಂತೆ ಮಾತಾಡುತ್ತ ಕುಳಿತಿರುತ್ತಿದ್ದ ಇವರಿಗೇನಾಯಿತು ...??? ನನ್ನ ಹಾಗೆ ಡೈವೋರ್ಸ್ ಗೆನಾದರೂ ಅಪ್ಲೈ ಮಾಡಿದರೆ ಹೇಗೆ ?? ಛೆ ನನ್ನ ಯೋಚನೆಗಿಷ್ಟು ...... !!! ಈ ಎಲ್ಲ ಕುತೂಹಲಕ್ಕೊಂದು ಕೊನೆ ಕಾಣಿಸಲಾದ್ರು ಅವರನ್ನು ಕೇಳೆಲೆಬೇಕೆಂದು "ಏನ್ ಸರ್ ಒಬ್ಬರೇ ಕುಳಿತ್ತಿದ್ದೀರಿ ?.... ಎಲ್ಲಿ ನಿಮ್ಮ ಮನೆಯವರು ?"

ಅವರ ಕಣ್ಣಲ್ಲಿ ನೀರು "ನನ್ನ ಮನೆಯವರು ನನಗೆ ಡಿವೋರ್ಸ್ ಕೊಟ್ಟು ಹೋದರು .... !!!!"

ಅವರ ಉತ್ತರಕ್ಕೆ ದಂಗಾಗಿ ಹೋದೆ,ಅಲ್ಲೇ ಒಂದೆಡೆ ನನ್ನ ಮನಸ್ಸಿಗೆ ನಿರಾಳ ಭಾವ ,ಅಬ್ಭಾ ನಾನೊಬ್ಬನೇ ಅಲ್ಲ ಈ ರೀತಿ ನಿರ್ಧಾರ ತೆಗೆದುಕೊಳ್ಳುವವನು ಎಂಬ ನಿರಾಳ .... ಆದರೂ ಕುತೂಹಲ ,ಇಷ್ಟು ವರ್ಷದ ನಂತರ ಈ ನಿರ್ಧಾರ !!!!
"ಹ್ಞಾ !! ಏನೂ ಡೈವೋರ್ಸ್ !!!! ಏಕೆ ಸರ್ ಏನಾಯಿತು? ಅಲ್ಲ ಮೊನ್ನೆಯಷ್ಟೇ ಹೋಟೆಲ್ನಲ್ಲಿ ನೋಡಿದ್ದೆನಲ್ಲ ನಿಮ್ಮಿಬ್ಬರನ್ನು ,ಎಷ್ಟು ಚೆನ್ನಾಗಿದ್ದಿರಿ ,ನೋಡಲು ತುಂಬಾ ಸಂತೋಷವಾಗುತ್ತಿತ್ತು ..... ಏನಾಯಿತು ...ಅದೂ ಇಷ್ಟು ವರ್ಷಗಳ ನಂತರ ...!!!"

"ಹೌದಪ್ಪ ತುಂಬಾ ಚೆನ್ನಾಗಿ ಇದ್ವಿ ,ಪ್ರೀತಿ ನೇ ಹಾಗೆ,ಪ್ರೀತಿ ಎಲ್ಲಿ ಇರುತ್ತೋ ಅದು ಇರೊರಿಗೊಂದೇ ಅಲ್ಲ ಸುತ್ತಲಿನವರಿಗೂ ಸಂತೋಷನೇ ನೀಡುತ್ತೆ ,ನಾವು ಹಾಗೆ ತುಂಬಾ ಚೆನ್ನಾಗಿ ಇದ್ವಿ ಮೊನ್ನೆವರೆಗೂ ....ಮೊನ್ನೆ ಸಂಜೆ ತಿಂಡಿ ತಿಂದಾದ ನಂತರ ಕಾಫೀ ತರ್ತೀನಿ ಎಂದು ಎಷ್ಟು ಹೇಳಿದರು ನೀರೇ ಬೇಕೆಂದು ಹಠಮಾಡಿ ನೀರೇ ಕುಡಿದಳು .....
ಹ್ಞಾ..... !!  ನನಗೆ ಓಡಾಡಲು ಕಷ್ಟವಾಗುತ್ತದೆಂದು ಮತ್ತೆ ಕಾಫೀ ಬೇಡ ಎಂದಿರುತ್ತಾಳೆ ....ನನಗೆ ಗೊತ್ತು ಅವಳ ಮನಸ್ಸು ....!! " ನಿಟ್ಟಉಸಿರು ...ಮತ್ತೇ ಕಣ್ಣೀರು
ಹ್ಞಾ ಹೌದಲ್ಲ ಅವತ್ತು ಅವರು ನೀರು ಕುಡಿದ್ದಿದು ನೆನಪಾಯಿತು ....ಎಷ್ಟು ಕಾಫೀ ತರುತ್ತೇನೆಂದು ಹೇಳಿದರೂ ನೀರೇ ಬೇಕೆಂದು ಹಠ ಮಾಡಿ ಕುಡಿದ ಆಯಮ್ಮನ ಬಗ್ಗೆ ಆದಿನ ಎಂತಹ ಹೆಂಗಸು ,ಆತ ಅಷ್ಟು ಪ್ರೀತಿ ತೋರಿದರೂ ಕೇಳುತ್ತಿಲ್ಲವಲ್ಲಾ ಅನಿಸಿದ್ದು ನೆನಪಾಯಿತು ..... ಬೇಡ ಎಂದು ನೀರು ಕುಡಿದ ಹಿನ್ನಲೆಗೂ ಪ್ರೀತಿಯೇ ಕಾರಣ ಎಂದು ಈಗ ಅರಿವಾಯಿತು....ಛೇ .... ಎಲ್ಲ ವಿಷಯದಲ್ಲೂ ದ್ರಷ್ಟಿ ಗೆ ನಿಲುಕದ ಚಿತ್ರ ಒಂದಿರುತ್ತದೆ ... ಮತ್ತೆ ಏನೋ ಅಪರಾಧಿ ಭಾವ ....
ನನ್ನೆಲ್ಲ ಯೋಚನೆಗಳಿಗೆ ಕಡಿವಾಣ ಹಾಕಿ ಕಣ್ಣೀರು ಒರೆಸುತ್ತಾ  ಆತ ಮುಂದುವರೆದ " ಆ ನೀರೇ ಅವಳಿಗೆ ಗಂಗಾಜಲ  ಆಯಿತೋ ಏನೋ ಎಂಬಂತೆ ಮನೆಗೆ ಹೋಗುವ ಮೊದಲೇ ಏನಾಯಿತೋ ಕಾಣೆ ಹಾರ್ಟ್ ಅಟ್ಯಾಕ್ ಆಗಿ ಅವಳ ಜೀವ ನನ್ನ ಜೀವದೊಂದಿಗೆ ಬೇರೆ ಆಯಿತು ..... ಆದರೆ ಅವಳ ಆತ್ಮಕ್ಕೆ ಓಂಟಿ ಎಂಬ ಭಾವನೆ ಬರಬಾರದಲ್ಲ ಒಂದೊಮ್ಮೆ ಈ ಸಮಯಕ್ಕೆ ಅವಳು ಇಲ್ಲಿಗೆ ಬಂದರೆ ಎಂದು ನಾನು ಇಲ್ಲಿಗೆ ಬಂದೆ ......."

ನಾನಂತೂ ದಂಗು !!!!! "ಹ್ಞಾ !!! ಮತ್ತೆ ಡೈವೋರ್ಸ್ ಎಂದಿರಿ ....!!!?????"

"ಹೌದಪ್ಪ ಇದು ದೇವರು ನೀಡಿದ ಡೈವೋರ್ಸ್ .....ಡೈವೋರ್ಸ್ ಜೀವಿಗಳನ್ನು ಬೇರೆ ಮಾಡಬಹುದು ಆದರೆ ಮನಸ್ಸುಗಳ್ಳನ್ನು ,ಬೆಸೆದ ಭಾಂದವ್ಯಗಳನ್ನು ,ಒಡನಾಡಿದ ನೆನಪುಗಳನ್ನು ದೂರಮಾಡಲು ಸಾಧ್ಯವೇ ??!!! ,ನನಗೆ ಈ ಡೈವೋರ್ಸ್ ಬೇಕಾಗಿರಲಿಲ್ಲ .... ಆದರೆ ಜೀವನದ ಯಾವುದೋ ಒಂದು ಹಂತದಲ್ಲಿ ಒಮ್ಮೆ ಹಾಗೆಲ್ಲೋ ಯೋಚಿಸಿರಬೇಕು ಬಹುಷಃ ,ಅದರ ನೋವು ಈಗ ಅನುಭವಿಸುತ್ತಿದ್ದೇನೆ ...."

ನನ್ನ ಮನಸ್ಸಲ್ಲಿ ಅಪರಾಧೀ ಭಾವ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗಿ ಚುಚ್ಹುತ್ತಿತ್ತು  "ಅಲ್ಲ ಅಂಕಲ್ ,ಅವರೊಂದಿಗೆ ಜೀವಿಸಲು ಸಾಧ್ಯವಿಲ್ಲ  ಎಂದಾದಾಗ ಬೇರೆಯಾಗಿ ಸಂತೋಷವಾಗಿರುವುದು ಯೋಗ್ಯವಲ್ಲವಾ ? ಇರುವ ಒಂದು ಜೀವನವನ್ನು ಸಂತೋಷವಾಗಿ ಕಳೆಯಬಹುದಲ್ಲವೇ ???!!!"

"ಇರಬಹುದಪ್ಪಾ ....ಮತ್ತೊಂದು ಜೀವಿಯೊಂದಿಗೆ ಬದುಕಲೇ ಸಾಧ್ಯವಿಲ್ಲ ಎಂದಾದಾಗ ,ಮುಳುಗೇ ಬಿಡುತ್ತೇವೆ ಎಂದಾದಾಗ ಹೊರಬರುವುದು ಯೋಗ್ಯ ,ಆದರೆ ಕ್ಷುಲ್ಲಕ ಕಾರಣಗಳಿಗೆ ಸಂಬಂಧಗಳನ್ನು ದೂರವಾಗಿಸುವ ನಿರ್ಧಾರ ಸಮಾಜಕ್ಕೆ ಹಿತವಲ್ಲ ..... ಅಂತಹ ಸಂದರ್ಭದಲ್ಲಿ ವಿಚಾರಿಸಿ,ಸಮಾಲೋಚಿಸಿ ಇಬ್ಬರೂ ಒಬ್ಬರಿಗೊಬ್ಬರು ಅನುನಯಿಸಿಕೊಂಡು ಹೋಗುವ ನಪ್ರಯತ್ನ ಮಾಡಿದರೆ ಒಳ್ಳೆಯದು ....ನಮಗಾಗಿ ಒಂದು ಜೀವವನ್ನು ಪರಮಾತ್ಮ ಕಳುಹಿಸಿಕೊಟ್ಟಿದನಲ್ಲ ಅದಕ್ಕೆ ಸಂತೋಷ ಪಡಬೇಕು ...ಎಷ್ಟೋ  ಜನಕ್ಕೆ ಆ ಭಾಗ್ಯ ಕೂಡಾ ಇರುವುದಿಲ್ಲ .... ಯಾರೂ ಪರಿಪೂರ್ಣರಲ್ಲ ,ಹೇಗೆ ಎಲ್ಲವು ನಮ್ಮಿಚ್ಚೆಯಂತೆ ಆಗುವುದಿಲ್ಲವೋ ಹಾಗೆ ಯಾರು ಸಂಪೂರ್ಣವಾಗಿ ನಮ್ಮಿಚ್ಚ್ಚೆಯಂತೆ ಇರುವುದಿಲ್ಲ .... ನಮಗೆ ಬೇಕಾದಹಾಗೆ ಅವರಿರಬೇಕು ಎನ್ನುವಾಗ ಅವರಿಗೆ ತಕ್ಕ ಹಾಗೆ ನಾವಿದ್ದೇವೆಯೇ ಎನ್ನುವ ಪ್ರಶ್ನೆ ಮೂಡುತ್ತದೆ ..... ಪರಸ್ಪರರ ಭಾವನೆಗೆ ಸ್ಪಂದಿಸಿದರೆ ಈ ದೂರ,ಹತ್ತಿರ ಎನ್ನುವ ಪ್ರಶ್ನೆಯೇ ಮೂಡುವುದಿಲ್ಲ ..... ಅವರವರ ಕರ್ತವ್ಯ ಮುಗಿದಾಗ ಜೋಡಿಸಿದ ಆ ದೇವರೇ ಡೈವೋರ್ಸ್ ಕೊಡಿಸುತ್ತಾನೆ ...ಈಗ ನಮಗೆ ಕೊಡಿಸಿದ್ದಾನಲ್ಲಾ ಹಾಗೆ... :( ನನಗೆ ಬೇಕಿರಲಿಲ್ಲ ಈ ಡೈವೋರ್ಸ್ .....ಹೇಗೆ  ತಂದೆ ,ತಾಯಿಗೆ ಇಂಥವರೇ ನಮ್ಮ ಮಕ್ಕಳಾಗಿ ಹುಟ್ಟಲಿ ಎಂಬ ಆಯ್ಕೆ ಇರುವಿದಿಲ್ಲ ,ಹಾಗೆ ಹುಟ್ಟಿದ ಮಕ್ಕಳು ನಮಗೆ ಹೊಂದಿಕೆ ಅಗಲ್ಲಿಲ್ಲ ಎಂದು ಪ್ರತಿಯೊಬ್ಬರ ತಂದೆ ತಾಯಿ ಮಕ್ಕಳನ್ನು ಅಗಲಿದ್ದಾರೆ ಏನಾಗುತ್ತಿತ್ತು ಯೋಚಿಸು... !!! ನಮಗೆ ಇಂಥದ್ದೊಂದು ಸುಂದರ ಜೀವನ ನಡೆಸಲು ಸಾಧ್ಯವಾಗುತ್ತಿತ್ತೇ ???!!! ಆದರೆ ಅವರು ಹಾಗೆ ಮಾಡದೇ ಪ್ರೀತಿಯಿಂದ ಸಾಕಿ ಸಲಹಿ ಒಂದು ಸುಂದರ ಜೀವನವನ್ನು ರೂಪಿಸಲು ಸಹಕರಿಸುತ್ತಾರೆ ,ಅದೇ ರೀತಿ ನಾವೂ ಪರಸ್ಪರರ ಭಾವನೆಗೆ ಸ್ಪಂದಿಸಿ ಆ ಪ್ರೀತಿಯನ್ನು ಬೆಳೆಸಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ...ಪ್ರೀತಿ ಯಾವಾಗಲು ಸುಂದರ ,ಪ್ರೀತಿ ಇದ್ದಲ್ಲಿ ಎಲ್ಲವು ಚೆಂದವಾಗಿರ್ತದೆ ...ಅದೇ ಪ್ರೀತಿಯಿಂದ ದೂರವಾದಾಗ ಎಲ್ಲವೂ ಆಪೂರ್ಣ ಎನಿಸಿಬಿಡುತ್ತದೆ ...ಈಗ ನನ್ನ ಹಾಗೆ"

"ಇರಲು ಜೊತೆಗೆನ್ನ ಜೀವ ,ಜಗತ್ತು ಸುಂದರ ಎಂಬ ಭಾವ "...ನಿಟ್ಟಿಸುರು ...

ನನ್ನ ಹೃದಯ ಹಗುರಾಗಿತ್ತು ....ಅಪರಾಧೀಭಾವದಿಂದ ಕುದಿಯುತ್ತಿದ್ದ ಮನಸ್ಸಿಗೆ ತಂಪಾದ ಭಾವ ಮೂಡಿಸಿತ್ತು ಇವರ ಮಾತು ಮತ್ತು ಸಂಜೆಯ ತಂಪು ತಂಗಾಳಿ ...ಆಗಸದಲ್ಲಿ ಮುಳುಗಿದ ಸೂರ್ಯ ನನ್ನ ಮನಸಲ್ಲಿ ಉದಯಿಸುತ್ತಿದ್ದ ....ಮತ್ತೆ ಹೊಸ ಕಿರಣ ,ಹೊಸ ಮುಂಜಾವು ...ತಿಳಿಯಾದ ಮನಸ್ಸು ...ಗುರಿ ಸ್ಪಷ್ಟವಾಗಿತ್ತು

ಜೊತೆಯಿರಲು ನೀನು ,ಮರೆವೆನು ಜಗತ್ತನ್ನೇ ನಾನು ......
              ಕಲ್ಲಿರಲಿ ,ಹೂವಿರಲಿ ,ಮುಳ್ಳಿರಲಿ ,ಮಂಜಿರಲಿ ........
                         ನಡೆಯೋಣ ಹೊಸಗನಸ ಹೆಗಲೇರಿಸಿ ........
                           ಪ್ರೀತಿ ತೋರಿದ ದಾರಿಯಲಿ  .........
                                 ಕಣ್ಣಲ್ಲಿ ಅದೇ ಬೆಳಕು ,ಮನದಲ್ಲಿ ಅದೇ ಪ್ರೀತಿ .....
                                         ಚಿಮ್ಮುತಿರಲಿ,ಹೊಮ್ಮುತ್ತಿರಲಿ ,ಎಂದಿಗೂ ಹಸಿರಾಗಿರಲಿ
                                                     ಜೊತೆಯಿರಲು ನೀನು ,ನನಗೇನು ಬೇಕು ಇನ್ನು.....
                                                                ಮರೆವೆನು ಜಗತ್ತನ್ನು ಇನ್ನು ನಾನು ........


.Note : inspired by :
 http://timesofindia.indiatimes.com/life-style/relationships/man-woman/Gurgaons-silliest-reasons-for-divorce/articleshow/29503387.cms



12 comments: