Saturday, May 13, 2017

ಬಿಡದಾ ಭುವಿಯಾ ಮಾಯೆ.....

( ಆಕಾರಕ್ಕೊಂದು  ಅವತಾರ :) ರವಿ ಮಡೋಡಿ  ಕ್ಯಾಮರಾ ಕಣ್ಣಿನಿಂದ ಸೆರೆ ಹಿಡಿದ ಆಕಾರಕ್ಕೊಂದು ಅವತಾರ ಕೊಡುವ ಪ್ರಯತ್ನ :) ಚಿತ್ರಕ್ಕೊಂದು ಕತೆ :) )  ಬಿಡದಾ ಭುವಿಯಾ ಮಾಯೆ ....... 

ಮುಂಜಾವಿನ ಹೊಂಬೆಳಕ ಕಾಂತಿಗೆ ಪುಳಕಗೊಂಡು ಮೈ ಮರೆತು ನಿದ್ರಿಸುತ್ತಿದ್ದ ಹೂಗಳು  ಕಣ್ಣು ಬಿಡುತ್ತಿರುವ ಸಮಯದಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ನನ್ನ ಪ್ರತಿದಿನದ ಸುಪ್ರಭಾತ ....  ಪುಟ್ಟ ಕಿಟಕಿಯ  ಸರಳುಗಳ ನಡುವೆ  ತನ್ನ ಹೋಂಗಿರಣದ ಕೈ ಚಾಚಿ ನನ್ನ ಕಣ್ಣಲ್ಲಿ ದಿನವೂ ಹೊಂಬೆಳಕು ತುಂಬುವ ಸೂರ್ಯ ಇಂದೇಕೋ ಮೋಡ ಕವಿದಂತೆ ಸಪ್ಪಗಿರುವುದು !!??
ಏನು ಮಳೆ ಬರುವ ಸೂಚನೆಯೋ ??
ನನಗೆ ಕಂಡಹಾಗೆ ಎಲ್ಲ ಜೀವಿಗಳ ಭಾರ ಬವಣೆ ಹೊತ್ತು ಬಳಲಿ ಬೆಂಡಾದ ಭೂಮಿಗೆ ಮೋಡದಲ್ಲಿ ಮರೆಯಾಗಿ ಮಳೆಯಾಗಿ ಬಂದು ಭೂಮಿಯನ್ನು ಮುದ್ದಾಡಿ ಮತ್ತೆ ಆಗಸ ಸೇರುವ ಸೂರ್ಯ ಭುವಿಯ ಮುಖದಲ್ಲಿ ಹಸುರಿನ ಮುಗುಳ್ನಗೆ ತುಂಬಿ,ಜೀವಿಗಳ ಕಣ್ಣಲ್ಲಿ ಆಶಾಭಾವ ಹೊಮ್ಮಿಸಿ ಮತ್ತೆ ಎಂದಿನಂತೆ ಸಹಜವಾಗಿ ಕರ್ತವ್ಯದ ಎಡೆಗೆ ಮುಖಮಾಡಿ ನಗುವ ಸೂರ್ಯನಿಗೂ ಗ್ರಹಣ ಬಡಿದಾಗ ಜಗತ್ತೇ ಕತ್ತಲ ಕೂಪದಲ್ಲಿ ಮುಳುಗುತ್ತದೆ ... ಆದರೆ ಭೂಮಿ ಮಾತ್ರ ತನ್ನ ಬಳ್ಳಿಗಳ ಮನಸಿಗೆ ತಂಪೆರಯಲು ಪ್ರಯತ್ನಿಸುತ್ತಾ ಸೂರ್ಯನ ಬೆಳಕಿನ ನಿರೀಕ್ಷೆಯಲ್ಲಿ ಬೇಯುತ್ತದೆ ... ಇವಳು ಹಾಗೆ ,ಭೂಮಿಯ ಪ್ರತಿಬಿಂಬ ನನ್ನ ಕಣ್ಣಿಗೆ ....
ಹೊರಗಿನ ಪರಿಸರದ ಪ್ರತಿಬಿಂಬವೋ ಅವಳು ಎನ್ನುವಂತೆ ಯಾಕೋ ಇಂದು ಅವಳ ಮುಖದಲ್ಲಿ ಪ್ರಶಾಂತತೆಯ ಬದಲು ಚಿಂತೆಯ ಕಾರ್ಮೂಡ ಇಣುಕುತ್ತಿದೆ ... ಅವಳ ಕಣ್ಣು ಯಾವತ್ತೂ ತನ್ನ ಪ್ರಶಾಂತತೆಯನ್ನು ಕಳೆದು ಕೊಂಡದ್ದೇ ನೋಡಿಲ್ಲ ನಾನು .... ಕಾರಣ ಏನಿರಬಹುದು ... ????? ನಾನೇ  ಇರಬಹುದೇ ???!!
ಯಾವಾಗಲು ಉತ್ಸಾಹ ಚಿಮ್ಮುತ್ತಿರುವ ಕಣ್ಣುಗಳಲ್ಲಿ ಕಂಡು ಕಾಣದಂತ ದುಃಖದ ನೀರಿನ ಪಸೆ ...ಮಾತಲ್ಲಿ ದ್ರಢತೆ ,ಕಣ್ಣಲ್ಲಿ ಉತ್ಸಾಹ ,ಮುಖದಲ್ಲಿ ಎಂದಿಗೂ ಮಾಸದ ಆ ನಗು ಇಂದು ಎಲ್ಲವು ಮಾಯವಾಗಿ ಮನದಲ್ಲಿ ಕಟ್ಟಲು ತುಂಬಿದಂತೆ ಕಾಣುವ ಮುಖ ... !!??
ಎಲ್ಲ ದಿನದಂತೆ ಕೆಲಸಕ್ಕೆ ಹೋಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ ....ಏನಿರಬಹುದು ??ಆರೋಗ್ಯ ಸರಿ ಇಲ್ಲದಿರಬಹುದೇ ?ಅಥವಾ ನನ್ನ ಬಗ್ಗೆ ಚಿಂತೆ ಜಾಸ್ತಿ ಆಗಿರಬಹುದೇ !!?? ಎಲ್ಲ ಪ್ರಶ್ನೆಗಳಿಗೂ  ಉತ್ತರ ಅವಳೇ ಹೇಳಬೇಕು ...ಆದರೆ ಏಕೆ ನನ್ನ ಹತ್ತಿರವೂ ಸುಳಿಯುತ್ತಿಲ್ಲ ...ಏನಾಗಿದೆ !!!!?????
ಅವಳೇ ಹೇಳುತ್ತಿದ್ದಳಲ್ಲ ಎಲ್ಲ ಸುಂದರ ಸಂಭಂದಗಳಿಗೂ ಭದ್ರ ಬುನಾದಿ ಸ್ನೇಹ ... ಎಲ್ಲ ಸಂಬಂಧಗಳಿಗೆ ಕಾಲಘಟ್ಟದ ಮಿತಿಯಿದೆ ,ಆದರೆ ಜಗತ್ತಿನಲ್ಲಿ ಸ್ನೇಹಕ್ಕೆ ಯಾವುದೇ ಕಾಲ,ಜಾತಿ,ಭಾಷೆ ,ವಯಸ್ಸಿನ ಹಂಗಿಲ್ಲ ... ಎಲ್ಲ ಸಂಬಂಧಗಳ ಪ್ರಾರಂಭ ಸ್ನೇಹ ..... ನಾನು ಈ ಭೂಮಿಯ ತೆಕ್ಕೆಗೆ ಬಿದ್ದಾಗ ಮೊದಲ ಹಿತವಾದ ಸ್ಪರ್ಶ ಇವಳದ್ದೇ... ಇವಳೊಂದಿಗೆ ನನ್ನ ಮೊದಲ ಸ್ನೇಹ ... ಇವಳೇ ನನಗೆ ಉಳಿದ ಸಂಬಂಧಗಳೊಡನೆ ಸ್ನೇಹ ಬೆಳೆಸಲು ಪ್ರೇರಣೆ ... ಅವಳ ಅಕ್ಕರೆ, ಮಮತೆ ,ಪ್ರೀತಿ ನನ್ನೆಷ್ಟು  ಅವರಿಸಿತ್ತೆಂದರೆ ಅವಳಿದ್ದರೆ ಜಗತ್ತು ಸುಂದರ ,ಅವಳೊಮ್ಮೆ ನನ್ನ ಬಿಟ್ಟು ಹೋದರೆ ಎನ್ನುವ ಅನಿಸಿಕೆ ಕೂಡ ನನಗೆ ಅಳು ಭರಿಸುತ್ತಿತ್ತು ....ಅವಳಿದ್ದರೆ ಈ ಜಗತ್ತಿನಲ್ಲಿ ನಾನು ಕ್ಷೇಮ .... ಅವಳ ಆ ಸ್ನೇಹ ನನಗೆ ಎಲ್ಲಿಲ್ಲದ  ಉತ್ಸಾಹ ,ಹುಮ್ಮಸ್ಸು ,ಶಕ್ತಿ  ತುಂಬುತ್ತಿತ್ತು .... ಆದರೆ ಇಂದು ಇವಳೇಕೆ ಇಷು ಮಂಕಾಗಿದ್ದಾಳೆ ....??!!
ಇಷ್ಟು ವರ್ಷಗಳ ಅವಧಿಯಲ್ಲಿ ಎಲ್ಲೋ ಒಂದಿನ ಮಾತ್ರ ಅದೂ ನಾನು ಪೋಲಿಯೋ ಪೀಡಿತನಾಗಿ ಎರಡೂ ಕಾಲು ಸ್ವಾಧೀನ ತಪ್ಪಿದಾಗ ಇಷ್ಟು ಮಂಕಾಗಿದ್ದನ್ನು ನೋಡಿದ ನೆನಪು ...ತಂದೆಯ ನೆನಪಾಗಿರಬಹುದೇ ...??ತಂದೆಯ ಮುಖ ನೋಡಿದ ನೆನಪು ನನಗಿಲ್ಲ ....ಆದರೆ ಈಗ ಏನಾಗಿರಬಹುದು ??ನನಗಂತೂ ಎದ್ದುಹೋಗಿ ನಾನಿದ್ದೇನಮ್ಮಾ ಏನು ಚಿಂತೆ ಎನ್ನುವ ಅವಕಾಶವಿಲ್ಲ ...ನಾನಿದ್ದೇನಮ್ಮಾ ನಿನ್ನ ಚಿಂತೆಗೆ ಎನ್ನುವ ಅಸಹಾಯಕ ಪರಿಸ್ಥಿತಿ ..... ಒಂದು ಪುಟ್ಟ ಕಿಡಕಿ ,ಈ ನಾಲ್ಕು ಗೋಡೆ ,ಆ ಕಿಟಕಿಯಲ್ಲಿ ಕಾಣುವಷ್ಟು ಹೊರಗಿನ ದ್ರಶ್ಯ ,ಕಾಲ ಕಳೆಯಲು ಅಮ್ಮನೇ ತಂದುಕೊಟ್ಟ ಪೈಂಟ್ ಹಾಗೂ ಬ್ರಷ್ ,ಅಮ್ಮನೇ ಧಾರೆ ಎರೆದ ಅಕ್ಷರಗಳು ನನ್ನನ್ನು ದಿನಪತ್ರಿಕೆ ಓದುವಷ್ಟು ಸಬಲ ನನ್ನಾಗಿ ಮಾಡಿದೆ ,,ಅವಳು ನಗುತ್ತಿದ್ದರೆ ಮಾತ್ರ ನನಗೆ ನೆಮ್ಮದಿ,ಸಂತೋಷ ...ಅವಳ ಚಿಂತೆ ,ಅಳು ನನಗೆ ಸಹಿಸಲು ಅಸಾಧ್ಯ ...ಅವಳನ್ನು ಕೂಗಿ ಕೇಳುವುದೇ ಒಳ್ಳೆಯದು .."ಅಮ್ಮಾ ,ಇಂದು ಕೆಲಸಕ್ಕೆ   ಹೋಗೋದಿಲ್ವೇನಮ್ಮಾ ?"
ಅವಳ ಮುಖ ಮತ್ತಷ್ಟು ಸಪ್ಪಗಾಯಿತು ,ಹತ್ತಿರ ಬಂದು ಸುಮ್ಮನೆ ಕುಳಿತ ಅವಳನ್ನು ನೋಡಿ ಭಯವಾಯಿತು "ಏನಮ್ಮಾ ಆರೋಗ್ಯ ಚೆನ್ನಾಗಿಲ್ಲವೇ ?" ಎಂದಾಗ
"ನಾ ಕೆಲಸಕ್ಕೆ ಹೋಗುವ ಮನೆಯವರು ನಿನಗೆ  ವಯಸ್ಸಾಯಿತು ,ಇನ್ನು ನಿನ್ನಿಂದ  ಮನೆಗೆಲಸ  ಮಾಡಿಸುವುದು ಕಷ್ಟ ...ಹಾಗಾಗಿ ನಾಳೆಯಿಂದ ಬರುವುದು ಬೇಡ ಎಂದು ೩ ತಿಂಗಳ ಸಂಬಳ ಕೊಟ್ಟು ಕಳುಸಿದರಪ್ಪ " ಹೇಳುವಷ್ಟರಲ್ಲಿ ದುಃಖದ ಕಟ್ಟೆ ಒಡೆದಿತ್ತು ....
ಅವಳ ಅಳು ನನ್ನ ಹೊಟ್ಟೆಯಲ್ಲಿ ಸಂಕಟ ಹೆಚ್ಚಿಸುತ್ತಿತ್ತು ...ಹೊರಗೆ ಮಳೆ ...ಆಗಸದಲ್ಲಿ ಕಾರ್ಮೂಡ ...ಆದರೆ ನನಗೆ  ಬೆಳಕು ಬೇಕಿತ್ತು ... ಅವಳ ಆ ಸ್ನೇಹದ ಶಕ್ತಿ ಕಳೆಗುಂದಬಾರದು ,ಅಮ್ಮನ ಮನಸ್ಸಿನಲ್ಲಿ ಅಧೈರ್ಯ....... !!!!! ಆದರೆ ಇಂದು ಅವಳ ಆ ಅಧೈರ್ಯದ  ಅಪ್ಪುಗೆ ಕೂಡ ನನಗೆ  ಏನೋ ಒಂದು ರೀತಿಯ ಧೈರ್ಯ ಕೊಡುತ್ತಿತ್ತು .... ನಮ್ಮ ಮೊರೆಗೆ  ಆ ಕಾರ್ಮೋಡವೂ ಕರಗಿ ನೀರಾಗಿ ಭರವಸೆಯ  ಬೆಳಕು ನಮ್ಮ ಬದುಕಲ್ಲಿ ಮೂಡಲು ಹವಣಿಸುತ್ತಿತ್ತು ... ಅಂದು ಎಂದೋ ದಿನಪತ್ರಿಕೆಯಲ್ಲಿ  ವ್ಯಂಗ್ಯ ಚಿತ್ರ ಬಿಡಿಸುವ ಕೆಲಸಕ್ಕಾಗಿ ನಾನು ಹಾಕಿದ ಅರ್ಜಿ ಆಯ್ಕೆ ಆಗಿತ್ತು... ಅಂಗವೈಕಲ್ಯದ ಅನುಕಂಪದ ಆಧಾರದ ಮೇಲೆ ಮನೆಯಲ್ಲಿ ಕೂತು ಕೆಲಸ ಮಾಡಲು ಅನುಮತಿ ದೊರೆತಿತ್ತು ..... ಅಮ್ಮನ ಕಣ್ಣಲ್ಲಿ   ಖುಷಿ ಹುಟ್ಟಿಸಿದ ಮೊದಲ ಘಳಿಗೆ ...ಅವಳ ಮುಖದಲ್ಲಿನ ಮಂದಹಾಸಕ್ಕೆ ನಾನು ಕಾರಣ ಎಂಬ ಯೋಚನೆ ಜಗತ್ತಿನ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿತ್ತು ... ಈ ನನ್ನ ಬೆಳವಣಿಗೆ ನಿನ್ನ ಸ್ನೇಹದ ಶಕ್ತಿಯ ಕೊಡುಗೆ ಅಮ್ಮ ನನ್ನ ಮನಸ್ಸು ಕೂಗಿ ಹೇಳುತ್ತಿತ್ತು ...

ಇರಲು ಸ್ನೇಹದ ಜೊತೆ
       ಜಗತ್ತಿನ ಕಣ್ಣಿಗೆ ನಾನೊಂದು ಸುಂದರ ಕತೆ
        ಸ್ನೇಹವಿರದ  ಬರಡು ಬದುಕು
               ಆಗದು ಎಂದಿಗೂ  ದ್ರಶ್ಯ ಕಾವ್ಯ
                 ಕರಿಗಪ್ಪು ಕಾರ್ಮೋಡದ ಹಿಂದೊಬ್ಬ ಸೂರ್ಯ
                    ಬಂಗಾರದ  ಬೆಳಕು ಅಲೆಗಳ ಕಣ್ಣಲ್ಲಿ
                     ಬರಡು  ಮನಸೊಳಗೆ ಬೆಳಕಿನ ಆಟ
                        ಬರಡು ಬದುಕಿಗೊಂದು  ತಂಗಾಳಿಯ ಹಿತ
ಮುಳುಗುವ  ಭಯದ ಹಿಂದೊಂದು ಬೆಳಗುವ ಆಶಾಕಿರಣ
ಬರಡು ಜೀವಕೆ ಬಂಗಾರದ ಬದುಕಿನ ಆಲಾಪನಾ .......


No comments:

Post a Comment